Belagavi News In Kannada | News Belgaum

ವಿದ್ಯುತ್ ಶಾಕ್ ತಗುಲಿ ತಾಯಿ-ಮಗು ಸಾವು

ಬೆಂಗಳೂರು: ವಾಟರ್ ಹೀಟರ್‌ನಿಂದಾಗಿ ವಿದ್ಯುತ್ ಶಾಕ್ ತಗುಲಿ ತಾಯಿ ಹಾಗೂ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ತಾಯಿ ಜ್ಯೋತಿ ಹಾಗೂ ಆಕೆಯ 4 ವರ್ಷದ ಮಗು ಜಯಾನಂದ್ ವಿದ್ಯುತ್ ಶಾಕ್‌ನಿಂದ ಮೃತಪಟ್ಟವರು. ರಾಯಚೂರು ಮೂಲದ ಜ್ಯೋತಿ ತನ್ನ ಗಂಡ ಹಾಗೂ ಮಗನೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ನೆಲೆಸಿದ್ದರು. ಆಕೆ ಹೊಟ್ಟೆಪಾಡಿಗಾಗಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು.

ಭಾನುವಾರ ಮಧ್ಯಾಹ್ನ ಸ್ನಾನಗೃಹದಲ್ಲಿ ನೀರು ಬಿಸಿ ಮಾಡಲು ಇಟ್ಟಿದ್ದ ವಾಟರ್ ಹೀಟರ್‌ನಿಂದ ಬಾಲಕ ಜಯಾನಂದ್‌ಗೆ ಕರೆಂಟ್ ಶಾಕ್ ತಗುಲಿತ್ತು. ಮಗುವಿಗೆ ಶಾಕ್ ತಗುಲಿ ಒದ್ದಾಡುತ್ತಿರುವುದನ್ನು ಕಂಡ ಜ್ಯೋತಿ ಆತನನ್ನು ಕಾಪಾಡಲು ಮುಂದಾದಾಗ ಆಕೆಗೂ ಕರೆಂಟ್ ಶಾಕ್ ತಗುಲಿದೆ. ಇದರಿಂದ ತಾಯಿ ಹಾಗೂ ಮಗು ಇಬ್ಬರೂ ದಾರುಣವಾಗಿ ಅಂತ್ಯ ಕಂಡಿದ್ದಾರೆ.

ಭಾನುವಾರ ಮಧ್ಯಾಹ್ನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜ್ಯೋತಿ ಕುಟುಂಬ ಕೆಲ ದಿನಗಳ ಹಿಂದಷ್ಟೇ ರಾಯಚೂರಿನಿಂದ ಬೆಂಗಳೂರಿಗೆ ಬಂದಿತ್ತು. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದಿವರಿಸಿದ್ದಾರೆ.