Belagavi News In Kannada | News Belgaum

ಬಿಎಸ್‌ವೈಗೆ ಕಣ್ಣೀರು ಹಾಕಿಸಿದ ಬಗ್ಗೆ ಮೋದಿ ಉತ್ತರ ಕೊಡಲಿ: ಡಿಕೆಶಿ

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪಗೆ ಬಿಜೆಪಿ ಕೇಂದ್ರ ನಾಯಕರು ಕೊಟ್ಟ ನೋವಿನ ಬಗ್ಗೆ ಪ್ರಧಾನಿ ಮೋದಿ ಅವರು ಮಾತಾಡಬೇಕು ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೋದಿ ಅವರು ಬಿಎಸ್‌ವೈರನ್ನ ಹಾಡಿ ಹೊಗಳಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಎಸ್‌ವೈಗೆ ಈಗ ತೋರಿದ ನಮ್ರತೆ ಇಷ್ಟು ದಿನ ಎಲ್ಲಿ ಹೋಗಿತ್ತು? ಅವರ ಕಣ್ಣಲ್ಲಿ ನೀರು ಹಾಕಿಸಿ ಅಧಿಕಾರದಿಂದ ಕೆಳಗೆ ಇಳಿಸಿದ್ದು ಯಾಕೆ? ಎಂಬುದರ ಬಗ್ಗೆ ಪ್ರಧಾನಿಗಳು ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದರು.
ಮೋದಿ ಈ ದೇಶದ ಪ್ರಧಾನಿ, ನಾವು ಅವರನ್ನ ಗೌರವಿಸುತ್ತೇವೆ. ಆದರೆ ಬಿಜೆಪಿಯಲ್ಲಿ ಬಿಎಸ್‌ವೈ ಅವರಿಗೆ ಕೊಟ್ಟ ನೋವು, ವಿಧಾನಸೌಧದಿಂದ ರಾಜ್ಯಪಾಲರ ಮನೆವರೆಗೂ ಕಣ್ಣೀರು ಹಾಕಿಕೊಂಡೇ ಹೋಗಿ ರಾಜೀನಾಮೆ ನೀಡಿದ್ರಲ್ಲ, ಆ ಬಗ್ಗೆ ಮೋದಿ ಅವರು ಮಾತನಾಡಬೇಕು. ಯಡಿಯೂರಪ್ಪ, ಅವರ ಕುಟುಂಬದ ಸದಸ್ಯರು, ಆಪ್ತರ ಮೇಲೆ ಇ.ಡಿ (ಇಆ) ದಾಳಿ ನೋಟೀಸ್ ನೀಡಿರುವ ಬಗ್ಗೆ, ಅವರನ್ನು ತನಿಖಾಧಿಕಾರಿಗಳು ಎಷ್ಟು ಬಾರಿ ಕರೆಸಿಕೊಂಡು ವಿಚಾರಣೆ ಮಾಡಿದ್ದಾರೆ ಎಂಬುದರ ಬಗ್ಗೆ ಮೋದಿ ವಿವರಣೆ ನೀಡಬೇಕು ಎಂದರು.
ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ನಡೆಸಿ 104 ಸೀಟು ಪಡೆದ ನಂತರ ಅಧಿಕಾರದಿಂದ ಯಾಕೆ ಇಳಿಸಿದರು? ಚುನಾವಣೆ ಮಾಡಲು ಅವರು ಬೇಕಾಗಿತ್ತು, ಆಪರೇಷನ್ ಕಮಲ ಮಾಡಲು ಅವರೇ ಬೇಕಾಗಿತ್ತು. ಆದರೆ ಅಧಿಕಾರವನ್ನು ಮಾತ್ರ ಯಾಕೆ ಅವರಿಂದ ಕಸಿದುಕೊಂಡರು? ಅವರನ್ನು ನಾಯಕತ್ವದಿಂದ ತೆಗೆದ ನಂತರ ಪಕ್ಷಕ್ಕೆ ಅಭದ್ರತೆ ಎಂದುರಾಗಿದೆ. ಅವರ ಅಭಿಮಾನಿಗಳು ಬಿಎಸ್‌ವೈ ಹುಟ್ಟುಹಬ್ಬ ಆಚರಿಸಲು ಮುಂದಾದಾಗ ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಅವರ ಕಾಲದಲ್ಲಿ ಮಾಡಿದ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದಾರೆ ಸಂತೋಷ. ಆದರೆ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರಿಗೆ ತೋರಿದ ನಮ್ರತೆ ಇಷ್ಟು ದಿನ ಎಲ್ಲಿಗೆ ಹೋಗಿತ್ತು? ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎಂದು ಅಧಿಕೃತವಾಗಿ ಘೋಷಿಸಿ, ಅವರಿಗೆ ಜವಾಬ್ದಾರಿ ನೀಡಲಿ. ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಿಂದ ಇಳಿಸಿ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಲಿ. ಆಗ ಅವರ ನಮ್ರತೆಯನ್ನ ಜನ ನಂಬುತ್ತಾರೆ. ಅದನ್ನು ಬಿಟ್ಟು ರಾಜಕಾರಣದಲ್ಲಿ ನಾಟಕೀಯ ಸಿಂಪಥಿಯನ್ನು ಜನ ಒಪ್ಪಲ್ಲ ಎಂದು ಕುಟುಕಿದರು./////