ವರ್ಷದೊಳಗೆ ಬೆಳಗಾವಿಯಲ್ಲಿ ಹೊಸ ಆರ್ಟಿಒ ಕಚೇರಿ ನಿರ್ಮಾಣ ಪೂರ್ಣ: ಸಚಿವ ಗೋವಿಂದ ಕಾರಜೋಳ

ಬೆಳಗಾವಿ: ವರ್ಷದೊಳಗೆ ಹೊಸ ಆರ್ಟಿಒ ಕಚೇರಿ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಸಚಿವ ಗೋವಿಂದ ಕಾರಜೋಳ ಅವರು ಸೋಮವಾರ ಭರವಸೆ ನೀಡಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಆರ್ಟಿಒ ಕಚೇರಿ ಆವರಣದಲ್ಲಿ ಬೆಳಗಾವಿ ವಿಭಾಗದ ಪ್ರಾದೇಶಿಕ ಸಾರಿಗೆ ಜಂಟಿ ಆಯುಕ್ತರ ಕಚೇರಿ ಹಾಗೂ ಬೆಳಗಾವಿ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ‘8 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, 12 ತಿಂಗಳುಗಳ ಕಾಲ ಕಾಮಗಾರಿ ಗುತ್ತಿಗೆಯನ್ನು ನೀಡಲಾಗಿದೆ. ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಜನವರಿ 26, 2024ಕ್ಕೆ ಈ ಕಛೇರಿಯು ಸರ್ಕಾರಕ್ಕೆ ಆದಾಯವನ್ನು ತರಲಿದೆ, ಕಟ್ಟಡದ ನಿರ್ಮಾಣ ಕಾರ್ಯವು ಉತ್ತಮ ಗುಣಮಟ್ಟದಿಂದ ಕೂಡಿರಲಿದ್ದು, ಮುಂದಿನ ನೂರು ವರ್ಷಗಳ ಕಾಲ ಯಾವುದೇ ಸಮಸ್ಯೆಗಳು ಎದುರಾಗವುದಿಲ್ಲ. ಕಚೇರಿಯಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.
ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ ಮಾತನಾಡಿ, ‘ಈಗಿರುವ ಪ್ರಾದೇಶಿಕ ಸಾರಿಗೆ ಕಚೇರಿ(ಆರ್ಟಿಒ) ಕಟ್ಟಡವನ್ನು 1940ರಲ್ಲಿ ಅಂದಿನ ಬ್ರಿಟೀಷ್ ಅಧಿಕಾರಿ ಬರ್ನಾಡ್ ನಿರ್ಮಿಸಿದ್ದು, ಹಳೆಯ ಕಟ್ಟಡ ದುಸ್ಥಿತಿಯಲ್ಲಿರುವ ಕಾರಣ ಹೊಸ ಕಟ್ಟಡಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಸಂಸದೆ ಮಂಗಳಾ ಅಂಗಡಿ, ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ, ಹೆಚ್ಚುವರಿ ಆರ್ಟಿಒ ಅಧಿಕಾರಿ ಮಾರುತಿ ಸಾಂಬ್ರಾಣಿ, ಜಂಟಿ ಆಯುಕ್ತೆ ಎಂ.ಶೋಭಾ, ಮುಖ್ಯ ಅಭಿಯಂತರ ಪ್ರಕಾಶ ಕಬಾಡಿ, ಗುತ್ತಿಗೆದಾರ ಉದಯ ಶೆಟ್ಟಿ, ಮೋಟಾರು ನಿರೀಕ್ಷಕ ರವಿರಾಜ ಪವಾರ, ನೂರುಲ್ಲಾ ಎಚ್ಎಸ್, ಜೆಬಿ ನರಸಣ್ಣವರ, ಆನಂದ ಗಾಮನಟ್ಟಿ, ಸುಜಯ್ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.//////