Belagavi News In Kannada | News Belgaum

ಬೆಲೆ ಏರಿಕೆಯಿಂದ ಜನರಿಗೆ ಸಂಕಷ್ಟ, ಹೆಣ್ಣುಮಕ್ಕಳೂ ಹೈರಾಣಾಗಿದ್ದಾರೆ ಎಂದ ಮಾಜಿ ಸಿಎಂ ಸಿದ್ದು

ಸುಳ್ಳು ಹೇಳುತ್ತ ತಿರುಗುವುದೇ ಪ್ರಧಾನಿ ಮೋದಿ ಕೆಲಸ: ಸಿದ್ದರಾಮಯ್ಯ ಕಿಡಿ

ಬೆಳಗಾವಿ: ಬೆಲೆ ಏರಿಕೆಯಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ. ಹೆಣ್ಣುಮಕ್ಕಳೂ ಹೈರಾಣಾಗಿದ್ದಾರೆ. ಇದೀಗ ಮತ್ತೆ ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಳ ಮಾಡಲಾಗಿದೆ. ರೈತರ ರಕ್ತಹೀರಿ, ಸುಲಿಗೆ ಮಾಡಿ 6 ಸಾವಿರ ಕೊಟ್ಟಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯ ಪಂಥಬಾಳೇಕುಂದ್ರಿ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಮೋದಿ ವಿರುದ್ಧ ನೇರ ಟೀಕೆ ಮಾಡಿದ ಅವರು, ಮಜ್ಜಿಗೆ ಮೇಲೆ, ಪೆನ್ಸಿಲ್ ಮೇಲೆ, ಗೊಬ್ಬರದ ಮೇಲೆ ತೆರಿಗೆ ಬರೆ ಹಾಕಿ ರೈತರ ರಕ್ತ ಕುಡಿಯುತ್ತಿದ್ದೀರಿ ನೀವು. ನಾಲ್ಕೂವರೆ ಲಕ್ಷ ಕೋಟಿ ಕರ್ನಾಟಕದ ಜನರಿಂದ‌ ಸುಲಿಗೆ ಮಾಡುತ್ತಿದ್ದೀರಿ. ನಮಗೆ ವಾಪಾಸ್ ಕೊಡುವುದು ಬರೀ ಐವತ್ತು ಸಾವಿರ ಕೋಟಿ ಎಂದು ಟೀಕಿಸಿದರು. ಜತೆಗೆ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಸರ್ಕಾರಕ್ಕೆ ಕೊಡುವ ಅನುದಾನ ಕಡಿಮೆ ಆಗಿದೆ. ಈ ಕಾರಣಕ್ಕೆ ರಾಜ್ಯ ಸರ್ಕಾರ ಸಾಲ ತೆಗೆದುಕೊಳ್ಳುವ ಸ್ಥಿತಿ ಇದೆ. ಈ ಬಾರಿ 77,755 ಕೋಟಿ ರೂ. ಸಾಲ ತೆಗೆದುಕೊಳ್ಳುತ್ತಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿಲ್ಲ ಎಂದು ಹೇಳಿದರು.

ಐದು ವರ್ಷದಲ್ಲಿ ಬಿಜೆಪಿ 3.22 ಲಕ್ಷ ಕೋಟಿ ಸಾಲ ಮಾಡಿದೆ. ಪ್ರತಿಯೊಬ್ಬರ ತಲೆ ಮೇಲೆ 78 ಸಾವಿರ ಸಾಲ ಇದೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​​ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಒಬ್ಬರೇ ಟಿಕೆಟ್​​ಗೆ ಅರ್ಜಿ ಸಲ್ಲಿಸಿದ್ದಾರೆ. ಅವರನ್ನು ಕಣಕ್ಕಿಳಿಸಲಾಗುವುದು, ಗೆಲ್ಲಿಸಿ ಎಂದು ಜನರಲ್ಲಿ ಸಿದ್ದರಾಮಯ್ಯ ಮನವಿ ಮಾಡಿದರು.

ಅಡ್ವಾಣಿ, ಜೋಶಿಯನ್ನು ಕಡೆಗಣಿಸಿದ್ದು ಯಾರು?: ಕಾಂಗ್ರೆಸ್​ನಿಂದ ಮಲ್ಲಿಕಾರ್ಜುನ ಖರ್ಗೆಗೆ ಅಪಮಾನ ಆಗಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಹಿರಿಯ ನಾಯಕರಾದ ಮುರಳಿ ಮನೋಹರ್ ಜೋಶಿ, ಎಲ್​ಕೆ ಅಡ್ವಾಣಿ ಅವರನ್ನು ಕಡೆಗಣಿಸಿದ್ದು ಯಾರು? ಬಿಎಸ್​ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದು ಯಾರು? ಮೋದಿ ಹಾಗೂ ಅಮಿತ್ ಶಾ ಅಲ್ಲವೇ? ಈಗವರು ನಾಟಕ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಮಾತನಾಡಿ, ದುಡ್ಡು ಸರ್ಕಾರದ್ದು, ಜಾತ್ರೆ ಬಿಜೆಪಿಯದು, ಇದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವ್ಯವಸ್ಥೆ. ಇಂತಹ ಕೆಟ್ಟ ವ್ಯವಸ್ಥೆಯಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸುಳ್ಳು ಹೇಳಿ ದೇಶ ಆಳುತ್ತಿರುವ ಬಿಜೆಪಿಯವರು ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಮಾಡಿ ದೀನ, ದಲಿತರು ಸೇರಿದಂತೆ ಎಲ್ಲಾ ಸಮಾಜದ ಬಡವರನ್ನು ಸಂಕಷ್ಟಕ್ಕೆ ದುಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ ಈ ಬಿಜೆಪಿ ಸರ್ಕಾರ ನಾವು ಜಾರಿಗೆ ತಂದ ಜನಪರ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಇಂತಹ ಸರ್ಕಾರವನ್ನು ಮನೆಗೆ ಕಳಿಸುವ ಕೆಲಸವನ್ನು ಮತದಾರರು ಮಾಡಬೇಕೆಂದು ಕರೆ ನೀಡಿದರು.

ಪ್ರಧಾನಿ ಮೋದಿಯವರು ಹೇಳಿದ ಬುಲೆಟ್‌ ಟ್ರೆನ್‌ ಇನ್ನೂ ಬೆಳಗಾವಿಗೆ ಬರುತ್ತಿಲ್ಲ. ಕಳೆದ 9 ವರ್ಷದಿಂದ ಬುಲೆಟ್‌ ಟ್ರೆನ್‌ ಯಾವಾಗ ಬರುತ್ತೆ ಅಂತಾ ನಾವು ಕಾಯುತ್ತಿದ್ದೇವೆ ಎಂದ ಅವರು, ಇಂದು ಕೂಡ ಸಿಲಿಂಡರ್‌ ಬೆಲೆ 50 ರೂಪಾಯಿ ಜಾಸ್ತಿ ಆಗಿದೆ. ಈ ಬಿಜೆಪಿಯವರಿಗೆ ಜನ ಸಾಮಾನ್ಯರ ಕಷ್ಟ ಗೊತ್ತಾಗಲ್ಲ. ಕಾರಣ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರೆ ಎಲ್ಲರೂ ನೆಮ್ಮದಿ ಜೀವನ ನಡೆಸಲು ಸಾಧ್ಯವಿದೆ. ಅದಕ್ಕೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಸಂಘಟಿತರಾಗಬೇಕೆಂದು ಸಲಹೆ ನೀಡಿದರು.

ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಕಳೆದ ಎಲೆಕ್ಷನ್‍ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ 51 ಸಾವಿರ ಲೀಡ್‍ನಿಂದ ಗೆದ್ದಿದ್ದರು. ಈ ಜನಸಾಗರ ನೋಡಿದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಒಂದೂವರೆ ಲಕ್ಷ ಲೀಡ್‍ನಲ್ಲಿ ಬರಬಹುದು. ಕರ್ನಾಟಕದಲ್ಲಿ ನಿಮ್ಮ ಗೆಲುವು ಇತಿಹಾಸ ಮಾಡುತ್ತದೆ. ಈ ಕ್ಷೇತ್ರದ ಹೆಣ್ಣು ಮಕ್ಕಳು ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿದ್ದಾರೆ ಎಂದು ಕೇಳಿದ್ದೇವೆ. ಇಂದು ಅದು ಸಾಬೀತಾಗಿದೆ. ಪ್ರಜಾಧ್ವನಿ ಯಾತ್ರೆ ಎಲ್ಲಿ ಹೋದರೂ ಜನಸಾಗರ ಸೇರುತ್ತಿದೆ ಎಂದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ವಿಶ್ರಾಂತಿ ತೆಗೆದುಕೊಳ್ಳದೆ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ನಿಮ್ಮ ಸಮಸ್ಯೆಗೆ ಸ್ಪಂದಿಸಿದ್ದೇನೆ. ಆದರೂ ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಾನು ಕ್ಷೇತ್ರದ ಮನೆ ಮಗಳಾಗಿ ಅಭಿವೃದ್ಧಿ ಮಾಡಿದ್ದೇನೆ. ಇದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಸಾವಿರಾರು ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.