ಮುಖ್ಯವಾಗಿ ವಿದ್ಯಾರ್ಥಿಗಳು ಗುರು-ಹಿರಿಯರ ಮೇಲೆ ಗೌರವ ಇದ್ದಾಗ ಮಾತ್ರ ವಿದ್ಯಾರ್ಥಿಗಳನ್ನು ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸಲು ಸಾಧ್ಯ : ರಾಹುಲ್ ಜಾರಕಿಹೊಳಿ

ಯಮಕನಮರಡಿ: ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಅಗತ್ಯವಾಗಿದ್ದು, ಮುಖ್ಯವಾಗಿ ವಿದ್ಯಾರ್ಥಿಗಳು ಗುರು-ಹಿರಿಯರ ಮೇಲೆ ಗೌರವ ಇದ್ದಾಗ ಮಾತ್ರ ವಿದ್ಯಾರ್ಥಿಗಳನ್ನು ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸಲು ಸಾಧ್ಯ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ದೇವಗೆರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿ, ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಲು ಕ್ರಮ ಕೈಗೊಳ್ಳಬೇಕು. ಮೊಬೈಲ್ ಬಳಕೆಯಿಂದ ಅನೇಕ ಅವಘಡಗಳು ಸಂಭವಿಸಿದೆ. ಮಕ್ಕಳು ಪುಸ್ತಕ ಓದುವ ಹವ್ಯಾಸ ಜೊತೆಗೆ ಯೋಗ ಮತ್ತು ಪ್ರಾಣಾಯಾಮಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ವಿದ್ಯಾಭ್ಯಾಸ ಅತ್ಯಂತ ಪ್ರಮುಖವಾದದ್ದು, ಶಾಲೆಗಳು ವೃತ್ತಿಗಾಗಿ ಮಾತ್ರ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸದೇ ಅವರಲ್ಲಿ ಒಳ್ಳೆಯ ಪ್ರವೃತ್ತಿಗಳನ್ನು ಬೆಳೆಸುವ ಕೇಂದ್ರಗಳಾಗಬೇಕು ಎಂದ ಅವರು, ನಾವೆಲ್ಲರೂ ಕಾಲ ಬದಲಾಗಿದೆ ಎನ್ನುತ್ತೇವೆ ಆದರೆ ಬದಲಾಗಿರುವುದು ಕಾಲವಲ್ಲ ನಮ್ಮ ಚಿಂತನೆ, ಪ್ರವೃತ್ತಿ ಮತ್ತು ಮಾನಸಿಕತೆ. ಸಂಕಷ್ಟದ ಸಂದರ್ಭದಲ್ಲಿ ಆತ್ಮವಿಶ್ವಾಸದಿಂದ ಪುಟಿದೇಳಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಅಗತ್ಯವಿದೆ. ಮುಖ್ಯವಾಗಿ ಶಾಲೆಗಳು ಸಾಧಕರ ಛಾವಣಿಗಳಾಗಬೇಕು ಎಂದರು.
ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕಾದರೆ ಪಾಲಕರ ಸಹಾಯ ಸಹಕಾರ ಅಮೂಲ್ಯವಾಗಿದೆ. ಪಾಲಕರು ಮಕ್ಕಳಿಗಾಗಿ ಆಸ್ತಿಯನ್ನು ಗಳಿಸದೇ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡುವಂತೆ ಕರೆ ನೀಡಿದರು.
ಇದೇ ವೇಳೆ ದೇವಗೆರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಶಿಕ್ಷಕರು ಹಾಗೂ ಊರಿನ ಗಣ್ಯರು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ಇದಕ್ಕೂ ಮೊದಲು ಯಮಕನಮರಡಿ ಕ್ಷೇತ್ರದಲ್ಲಿ ಬರುವ ಕಡೂಲಿ ಗ್ರಾಮದಲ್ಲಿ ರಾಹುಲ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗವನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಸಾಗರ ಪಿಂಗಟ, ಜಿಪಂ ಮಾಜಿ ಸದಸ್ಯ ಅರುಣ್ ಕಾಂಟಾಬಳ್ಳಿ , ಕಡೋಲಿ ಗ್ರಾಪಂ ಮಾಜಿ ಅಧ್ಯಕ್ಷ ರಾಜು ಮಾಯನ್ನಾ, ಗೌಡಪ್ಪಾ ಪಾಟೀಲ್, ರಾಹುಲ್ ಜಾಧವ, ಊರಿನ ಹಿರಿಯರು ಗ್ರಾಮಸ್ಥರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.