Belagavi News In Kannada | News Belgaum

ಸಿಎಂ ಸೂಚನೆ ಮೇರೆಗೆ ಕೆಎಸ್‌ ಡಿಎಲ್‌ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಶಾಸಕ ಮಾಡಾಳ್

ಬೆಂಗಳೂರು: ಪುತ್ರ ಪ್ರಶಾಂತ್ ಮಾಡಾಳ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ ಬೆನ್ನಲ್ಲೆ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಕೆಎಸ್​ಡಿಎಲ್ (ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮ) ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ಸೂಚನೆ ಮೇರೆಗೆ ಶಾಸಕರು ಕೆಎಸ್​ಡಿಎಲ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮಾಡಾಳ್ ವಿರೂಪಾಕ್ಷಪ್ಪ ಮಗನ ಮೇಲೆ ಲೋಕಾಯುಕ್ತ ದಾಳಿಯ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಲೋಕಾಯುಕ್ತ ಪುನರ್ ಸ್ಥಾಪನೆ ಮಾಡಿರೋದೇ ಭ್ರಷ್ಟಾಚಾರ ತಡೆಯೋಕೆ. ಲೋಕಾಯುಕ್ತ ಸರ್ವ ಸ್ವತಂತ್ರವಾಗಿ ಕೆಲಸ ಮಾಡಲಿ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ತನಿಖೆಯಾಗಲಿ ಎಂದು ಹೇಳಿದರು.

ಇತ್ತ ಇಂದು ಬಂಧನಕ್ಕೊಳಗಾಗಿದ್ದ ಪ್ರಶಾಂತ್ ಮಾಡಾಳ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಪ್ರಶಾಂತ್ ಮಾಡಾಳ್ ಮತ್ತು ಕುಟುಂಬಸ್ಥರ ಬ್ಯಾಂಕ್​ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಇಂದು ಅಧಿಕಾರಿಗಳು ಪ್ರಶಾಂತ್ ಮಾಡಾಳ್ ಬ್ಯಾಂಕ್ ಖಾತೆಗಳ ಪರಶೀಲನೆ ನಡೆಸಲಿದ್ದಾರೆ.ಇತ್ತೀಚಿನ ಟ್ರಾನ್ಸಕ್ಷನ್ ಎಷ್ಟಿದೆ? ಯಾವ ಯಾವ ಖಾತೆಗಳಿಂದ ಹಣ ಬಂದಿದೆ. ಪ್ರಶಾಂತ್ ಮಾಡಾಳ್ ಸಂಬಳ ಹೊರತುಪಡಿಸಿ ಇತರ ಮೂಲಗಳಿಂದ ಹಣ ಸಂದಾಯವಾಗಿದೆಯಾ ಎಂದು ಪರಿಶೀಲನೆ ನಡೆಸಲಿದ್ದಾರೆ.
ಇನ್ನು ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರಿಗೂ ಲೋಕಾಯುಕ್ತ ನೋಟಿಸ್ ನೀಡುವ ಸಾಧ್ಯತೆಗಳಿವೆ. ಮಗನ ಜೊತೆ ಯಾವೆಲ್ಲಾ ವ್ಯವಹಾರ ನಡೆದಿದೆ ಎಂಬುದರ ಕುರಿತು ಮಾಹಿತಿ ಕಲೆ ಹಾಕಲು ವಿಚಾರಣೆಗೆ ಕರೆಸಬಹುದು. ಈ ಸಂಬಂಧ ಅಧಿಕಾರಿಗಳು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ./////