ರಾಜಹಂಸಗಡ ಕೋಟೆಯಲ್ಲಿ ಮುಂದುವರೆದ ಕದನ: ನಾಳೆ ಮತ್ತೊಮ್ಮೆ ಶಿವಾಜಿ ಪ್ರತಿಮೆ ಲೋಕಾರ್ಪಣೆ

ಬೆಳಗಾವಿ: ರಾಜಹಂಸಗಡ ಕೋಟೆ ಕದನ ಮುಂದುವರೆದಿದ್ದು ಸಿಎಂ ಉದ್ಘಾಟಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಾಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಮತ್ತೊಮ್ಮೆ ಲೋಕಾರ್ಪಣೆಗೊಳ್ಳಲಿದೆ.
ಲೋಕಾರ್ಪಣೆ ಸಂದರ್ಭದಲ್ಲಿ ಮಹಾರಾಷ್ಟ್ರದ ತುಳಜಾಪುರದಿಂದ ಆಗಮಿಸಿದ ಅರ್ಚಕರಿಂದ ಶಿವಾಜಿ ಪ್ರತಿಮೆಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಗುತ್ತದೆ. ಮಹಾರಾಜರ 13ನೇ ವಂಶಸ್ಥ ಯುವರಾಜ ಸಂಭಾಜಿರಾಜೇ ಛತ್ರಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಇದೆ.
ಭಾನುವಾರ ಬೆಳಗ್ಗೆ 9ರಿಂದ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಪಾಲಕಿ ಉತ್ಸವ, ಧ್ವಜಾರೋಹಣ, ಉತ್ಸವಮೂರ್ತಿ ಪೂಜೆಯೊಂದಿಗೆ ಪ್ರತಿಮೆ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಹಾರಾಷ್ಟ್ರದ ಮಾಜಿ ಗೃಹಸಚಿವ ಸತೇಜ್ ಪಾಟೀಲ್, ಮರಾಠಿ ನಟ ಹಾಗೂ ಸಂಸದ ಡಾ.ಅಮೋಲ್ ಕೋಲೆ, ಲಾತೂರು ಶಾಸಕ ಧೀರಜ್ ದೇಶಮುಖ್, ಖ್ಯಾತ ಚಿತ್ರನಟ ರಿತೇಶ್ ದೇಶಮುಖ್ ಸೇರಿ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಇಂದು ಶಾಸ್ತ್ರೋಕ್ತವಾಗಿ ಶಿವಾಜಿ ಪ್ರತಿಮೆಗೆ ಪೂಜೆ ನೆರವೇರುತ್ತಿದೆ. ನಾಳೆ ಸಂಜೆ 5.30ರಿಂದ ರಾಜಹಂಸಗಡ ಕೋಟೆಯಲ್ಲಿ ವಿವಿಧ ಸಾಂಸ್ಕೃತಿಕ ಕಾಯಕ್ರಮಗಳು, ಡೋಲ್ ತಾಶಾ, ಲೇಸರ್ ಶೋ, ಕ್ರ್ಯಾಕರ್ ಶೋ, ಮರದಾನಿ ಖೇಳ ಸೇರಿ ಪಾರಂಪರಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಎಂಎಲ್‍ಸಿ ಚನ್ನರಾಜ ಹಟ್ಟಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೃಣಾಲ್ ಹೆಬ್ಬಾಳ್ಕರ್ ಮಾತನಾಡಿ, ನಾಳೆ ಬೆಳಗ್ಗೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಆಗಲಿದೆ. ಹಲವು ರಾಜಕೀಯ ನಾಯಕರಿಗೆ, ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿಗಳಿಗೂ ಲಕ್ಷ್ಮಿ ಹೆಬ್ಬಾಳ್ಕರ್ ಆಹ್ವಾನ ನೀಡಿದ್ದಾರೆ ಎಂದಿದ್ದಾರೆ.