ಕರ್ನಾಟಕದ ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ: ಪಂಜಾಬ್ ಸಿಎಂ ಭಗವಂತ ಮಾನ್

ಹುಬ್ಬಳ್ಳಿ: ಕರ್ನಾಟಕದಲ್ಲಿರುವ ಸಮಸ್ಯೆಗಳೇ ಪಂಜಾಬಿನಲ್ಲಿವೇ, ವಿಶೇಷವಾಗಿ ರೈತರ ಸಮಸ್ಯೆಗಳು. ಕರ್ನಾಟಕ ಸರಕಾರ ಪಾಸ್ ಮಾಡಿರುವ ಮೂರು ಕೃಷಿ ಕಾಯ್ದೆ ಜಾರಿಯಿಂದಾಗಿ ಇಲ್ಲಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪಂಜಾಬ್ ಸಿಎಂ ಭಗವಂತ ಮಾನ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮೋದಿಯವರು ಕೃಷಿ ಕಾಯ್ದೆ ಹಿಂಪಡೆದಿದ್ದಾರೆ. ಆದರೆ ಕರ್ನಾಟಕ ಸರಕಾರ ಅದನ್ನು ಜಾರಿಗೊಳಿಸಿದೆ ಎಂದರು.
ಹಳೇ ಪಿಂಚಣಿ ಜಾರಿಗಾಗಿ ನೌಕರರು ಪರದಾಡುತ್ತಿದ್ದಾರೆ. ಪಂಜಾಬ್‌ನಲ್ಲಿ ಹಳೇ ಪಿಂಚಣಿ ನೀತಿ ಜಾರಿಗೆ ಕ್ರಮ ಕೈಗೊಂಡಿದ್ದೇವೆ. ಸಾವಿರಾರು ಸಂಖ್ಯೆಯ ಗುತ್ತಿಗೆ ನೌಕರರು ಸೇವೆ ಖಾಯಂಗೆ ಹೋರಾಡುತ್ತಿದ್ದಾರೆ. ಪಂಜಾಬಿನಲ್ಲಿ ಸುಮಾರು 28000 ಗುತ್ತಿಗೆ ನೌಕರರ ಖಾಯಂಗೊಳಿಸಲಾಗಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ನಾವು ಅಧಿಕಾರಕ್ಕೆ ಬಂದ ತಕ್ಷಣ ಪಂಜಾಬ್‌ನಲ್ಲಿ ಹೆಲ್ಪ್ ಲೈನ್ ಪ್ರಾರಂಭಿಸಿದ್ದೇವೆ. ಪ್ರತಿನಿತ್ಯ ಭ್ರಷ್ಟರು ಸಿಲುಕಿಕೊಳ್ಳುತ್ತಿದ್ದಾರೆ. ಮಂತ್ರಿ ಇರಲಿ, ಯಾರೇ ಇರಲಿ ಕಾನೂನು ಎಲ್ಲರಿಗೂ ಒಂದೇ. ಆದರೆ ಕರ್ನಾಟಕದಲ್ಲಿ ಭ್ರಷ್ಟಾಚಾರದಲ್ಲಿ ಶಾಸಕರೇ ಮುಳುಗಿದ್ದಾರೆ ಎಂದರು.
ಕರ್ನಾಟಕ ಮತ್ತು ಪಂಜಾಬ್‌ನಲ್ಲಿ ಒಂದೇ ರೀತಿಯ ಸಮಸ್ಯೆಗಳಿವೆ. ಆಮ್ ಆದ್ಮಿ ಪಕ್ಷ ದೆಹಲಿ ಮತ್ತು ಪಂಜಾಬಿನಲ್ಲಿ ಮಾಡಿದ ಕೆಲಸ ಕರ್ನಾಟಕದಲ್ಲಿ ಮಾಡಲು ಸಿದ್ಧ. ಆರೋಗ್ಯ, ಶಿಕ್ಷಣ, ವಿದ್ಯುತ್, ಕುಡಿಯುವ ನೀರಿನ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದೇವೆ. ಕರ್ನಾಟಕವನ್ನು ಸ್ವಚ್ಛ ಮಾಡಲು ಭ್ರಷ್ಟಾಚಾರ ಮುಕ್ತ ಸರ್ಕಾರ ಬರಬೇಕು. ಈಗಿರುವ ಸರ್ಕಾರ ತೆಗೆದು ಹಾಕಬೇಕು. ದೆಹಲಿ ಮತ್ತು ಪಂಜಾಬ್ ಜನರಂತೆ ಕರ್ನಾಟಕದ ಜನರು ಕ್ರಾಂತಿಕಾರಿ ಬದಲಾವಣೆಗೆ ತೆರೆದುಕೊಳ್ಳಬೇಕು. ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಹುಟ್ಟಿದೆ. ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿದೆ ಎಂದರು.
ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ದೇವಸ್ಥಾನದ ಮೇಲೆ ಖಲಿಸ್ತಾನಿ ಉಗ್ರರ ದಾಳಿ ವಿಚಾರವಾಗಿ, ಪಂಜಾಬಿನಲ್ಲಿರುವ ಪರಸ್ಪರ ಸಹೋದರತ್ವ, ಸಾಮಾಜಿಕ ಬೆಸುಗೆಯನ್ನು ಯಾರೂ ಕೆಟ್ಟ ದೃಷ್ಟಿಯಿಂದ ನೋಡಲಾಗದು. ಪಂಜಾಬ್ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ರಾಜ್ಯ ಮತ್ತು ಆ ಸ್ವಾತಂತ್ರವನ್ನು ಕಾಪಾಡಿಕೊಂಡು ಹೋಗಲಿದೆ ಎಂದರು.