ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; ನಾಲ್ವರಿಗೆ ಗಂಭೀರ ಗಾಯ.

ವಿಜಯಪುರ: ಜಿಲ್ಲೆಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಇತ್ತೀಚೆಗಷ್ಟೇ ಸ್ಥಾಪಿಸಿದ್ದ ನೂತನ ಬಾಯ್ಲರ್ ಸ್ಫೋಟಗೊಂಡು ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಇತ್ತೀಚೆಗೆ ನೂತನವಾಗಿ ಬಾಯ್ಲರ್ ಸ್ಥಾಪನೆ ಮಾಡಲಾಗಿತ್ತು. ಈ ಬಾಯ್ಲರ್ ಅನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡುವ ವೇಳೆ ಸ್ಫೋಟಗೊಂಡಿದೆ. ಈ ದುರ್ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.
ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಪೂನಾದ ಎಸ್ಎಸ್ ಇಂಜೀನಿಯರ್ಸ್ ನೂತನ ಬಾಯ್ಲರ್ ಅನ್ನು ಅಳವಡಿಸಿತ್ತು. 220 ಟನ್ ಕೆಪಾಸಿಟಿ ಹೊಂದಿದ್ದ ಬಾಯ್ಲರ್ ಅನ್ನು 51 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಬಾಯ್ಲರ್ ಇದೀಗ ಸ್ಫೋಟಗೊಂಡಿದ್ದು, ಆಧ್ಯಕ್ಷ ಶಶಿಕಾಂತ ಪಾಟೀಲ್ ನೇತೃತ್ವದ ಆಡಳಿತ ಮಂಡಳಿಯಿಂದ ಆಧಿಕಾರ ದುರುಪಯೋಗ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಕುರಿತು ತನಿಖೆ ನಡೆಸಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ.