ಉದ್ಯಮಿ ಮನೆಯಲ್ಲಿ ಕೋಟಿ ಕೋಟಿ ಹಣ ಕಂಡು ಪೊಲೀಸರೇ ಶಾಕ್

ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಶಾಸಕ ವಿರೂಪಾಕ್ಷಪ್ಪನ ಮಗನ ಮನೆಯಲ್ಲಿ 8 ಕೋಟಿಗೂ ಹೆಚ್ಚು ಹಣ ಸಿಕ್ಕ ಬೆನ್ನಲ್ಲೇ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ.
ಖಚಿತ ಮಾಹಿತಿ ಮೇರೆಗೆ ಹುಬ್ಬಳಿ-ಧಾರವಾಡ ಸಿಸಿಬಿ ಪೊಲೀಸರು, ಪ್ರತಿಷ್ಠಿತ ಉದ್ಯಮಿ ರಮೇಶ್ ಬೊಣಗೇರಿಯ ಭವಾನಿ ನಗರದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದ್ದು, 3 ಕೋಟಿ ಹಣ ಪತ್ತೆಯಾಗಿದೆ.
ಇಲ್ಲಿಯವರೆಗೆ ಹಣದ ಆದಾಯದ ಮೂಲ ಮಾತ್ರ ಬಯಲಿಗೆ ಬಂದಿಲ್ಲ. ಉದ್ಯಮಿ ರಮೇಶ್ ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟ ವ್ಯಾಪಾರಿಯಾಗಿದ್ದಾನೆ. ಜೊತೆಗೆ ರಾಜ್ಯ ಸರ್ಕಾರದ ಕೃಷಿ ಇಲಾಖೆಗೂ ಸಹ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಸರಬರಾಜು ಮಾಡುತ್ತಿದ್ದಾನೆ. ಶನಿವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 3 ಕೋಟಿ ರೂ.ಗಳನ್ನ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಶೋಕ್ ನಗರ ಪೊಲೀಸರು, ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಆದಾಯ ತೆರಿಗೆ ಅಧಿಕಾರಿಗಳು ಸಿಸಿಬಿ ಪೊಲೀಸರ ಜೊತೆಗೆ ಸೇರಿ ಹಣ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ಹಣದ ಮೂಲ ಅಪರಾಧದ ಹಿನ್ನೆಲೆ ಹೊಂದಿದ್ದರೆ, ಉದ್ಯಮಿ ರಮೇಶ್ ಬಂಧನವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ದಾಳಿಯ ಬೆನ್ನಲ್ಲೇ ಹುಬ್ಬಳಿ-ಧಾರವಾಡ ಸಿಸಿಬಿ ಪೊಲೀಸರು ಈ ಮಹತ್ವದ ಪ್ರಕರಣ ಬಯಲಿಗೆಳೆದಿದ್ದಾರೆ. ಅಧಿಕಾರಿಗಳಿಗೆ ಪೊಲೀಸ್ ಆಯುಕ್ತ ರಮಣಗುಪ್ತಾ ಅಭಿನಂದನೆ ಸಲ್ಲಿಸಿ, 25 ಸಾವಿರ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.////