ಹಿಂದೂ-ಮುಸ್ಲಿಮರ ಮಧ್ಯೆ ಜಗಳ ಹಚ್ಚುವ ಸರ್ಕಾರಗಳನ್ನ ಬೇರು ಸಮೇತ ಕಿತ್ತು ಹಾಕಿ: ಎಐಸಿಸಿ ಅಧ್ಯಕ್ಷ ಖರ್ಗೆ ಕರೆ

ತುಮಕೂರು: ಕೇಂದ್ರ ಮತ್ತು ರಾಜ್ಯದಲ್ಲಿ ಹಿಂದೂ, ಮುಸ್ಲಿಮರ ಮಧ್ಯೆ ಜಗಳ ಹಚ್ಚುವ ಸರ್ಕಾರಗಳಿವೆ. ಇವುಗಳನ್ನ ಕಿತ್ತೊಗೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.
ತುಮಕೂರು ಕೊರಟಗೆರೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂ-ಮುಸ್ಲಿಮರ ನಡುವೆ ಜಗಳ ಹಚ್ಚುವ ಸರ್ಕಾರಗಳನ್ನ ಕಿತ್ತೊಗೆಯಬೇಕು. ಕಾಂಗ್ರೆಸ್ ಸರ್ಕಾರ ನೀಡಿದ ಅಭಿವೃದ್ಧಿ ಕೆಲಸಗಳನ್ನ ಪುನಃ ಪಡೆಯಲು ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ಮೋದಿ ಕಲಬುರಗಿಗೆ ಬಂದಾಗ ಎರಡು ಕಡೆ ಭಾಷಣ ಮಾಡಿದ್ದಾರೆ. ಅವರಲ್ಲಿ ಅಧಿಕಾರ ಇದೆ, ಪಾಪ ಭಾಷಣ ಮಾಡಲಿ. ಸರ್ಕಾರಿ ಕಾರು, ಸರ್ಕಾರಿ ವಿಮಾನ ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಟೀಕಿಸೋದು ಎಷ್ಟು ಸರಿ ಎಂಬದುನ್ನು ಎಲ್ಲರು ಅರ್ಥಮಾಡ್ಕೊಬೇಕು ಎಂದು ಅವರು, ಇಂತಹ ಭ್ರಷ್ಟಾಚಾರ ಎಂದೂ ನೋಡಿಲ್ಲ. ಅಧಿಕಾರ ಕೊಟ್ಟಾಗ ದೇಶವನ್ನ ಸಮೃದ್ಧಮಾಡುವ ಬದಲಾಗಿ ಟೀಕೆ ಟಿಪ್ಪಣಿಗೆ ಬಿಜೆಪಿ ಸೀಮಿತವಾಗಿದೆ. ಮೋದಿ ಅವರ ಕೈಕೆಳಗೆ ಭ್ರಷ್ಟಾಚಾರ ನಡೆಯುತ್ತಿದೆ. ಕೇಂದ್ರ, ರಾಜ್ಯ ಸೇರಿದ್ರೆ 100% ಕಮೀಷನ್ ಅಲ್ಲೇ ಹೋಯ್ತು. ನನ್ನ ರಾಜಕಾರಣದ ಜೀವನದಲ್ಲಿ 11 ಬಾರಿ ಎಲೆಕ್ಷನ್‌ಗೆ ನಿಂತಿದ್ದೇನೆ. ಆದ್ರೆ ಇಂತಹ ಭ್ರಷ್ಟಾಚಾರ ಎಂದೂ ನೋಡಿಲ್ಲ. ಹಿಂದೆ ರಕ್ಷಣಾ ಸಚಿವರಾಗಿದ್ದ ಎಂ.ಡಿ ಅಂತನಿ ಹೆಚ್‌ಎಎಲ್ ಘಟಕ ಮಾಡಿದ್ರು, ಮೋದಿ ಒಂದಾದರು ಡ್ಯಾಮ್ ಮಾಡಿದ್ದಾರಾ? ಮೋದಿ ಬಡಾಯಿ ಕೊಚ್ಚಿಕೊಳ್ಳೋದು ಮಾತ್ರ ಬಿಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಬ್ ಕುಚ್ ಹಮ್ನೆ ದಿಯಾ’ ಅಂತಾರೆ: ಮೋದಿ ನಾವು ಮಾಡಿದ ಕೆಲಸ ಹೇಳ್ತಿಲ್ಲ. ಎಲ್ಲಾ ಕಡೆ ನಾವೇ ಮಾಡಿದ್ದು ಅಂತಾರೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ, 2014ರಲ್ಲಿ ಸ್ವಾತಂತ್ರ್ಯ ಬಂದವರಂತೆ ಮಾತನಾಡ್ತಾರೆ. ಅಂದು ನೆಹರು, ಇಂದಿರಾಗಾಂಧಿ ಪರಿಶ್ರಮದಿಂದ ಧಾನ್ಯದ ಭಂಡಾರ ತುಂಬಿದ್ದ ಪರಿಣಾಮ ಇಂದು ಎಲ್ಲರೂ ಊಟ ಮಾಡ್ತಿದ್ದಾರೆ. ಇದ್ಯಾವುದನ್ನು ಮೋದಿ ಹೇಳಲ್ಲ. `ಸಬ್ ಕುಚ್ ಹಮ್ನೆ ದಿಯಾ’ ಅಂತಾರೆ. ಈ ದೇಶದಲ್ಲಿ ವಿದ್ಯುತ್ ಬೆಳಕು, ನೀರು ಎಲ್ಲಾ ಇವರೇ ಕೊಟ್ರಾ? ಶಾಲಾ-ಕಾಲೇಜು ಅವರೇ ಮಾಡಿದ್ದಾ? ಈ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ 16% ಸಾಕ್ಷರತೆ ಇತ್ತು, ಈಗ 70% ಇದೆ. ಅದನ್ನ ಮೋದಿನೇ ಮಾಡಿದ್ರಾ? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದರು.
ಬಿಜೆಪಿಗೆ ನಾಚಿಕೆಯೇ ಇಲ್ಲದೇ, ಭ್ತಷ್ಟರನ್ನ ರಕ್ಷಣೆ ಮಾಡ್ತಿದೆ. ಬಿಜೆಪಿಯವರ ಮನೆಯಲ್ಲಿ ಕೋಟಿಗಟ್ಟಲೇ ಸಿಕ್ಕಾಗ ಕಣ್ಮುಚ್ಚಿ ಕುಳಿತುಕೊಳ್ತಾರೆ. ಆದ್ರೆ ಸಜ್ಜನರ ವಿರುದ್ಧ ಇಡಿ, ಐಟಿ, ಸಿಬಿಐ ದಾಳಿ ಮಾಡ್ತಿಸ್ತಾರೆ. ಹೆದರಿಸಿ, ಬೆದರಿಸಿ ಆಳ್ವಿಕ ಮಾಡುವ ಕೆಲಸ ಮಾಡ್ತಿದ್ದಾರೆ. ಈ ಬೆದರಿಕೆಗೆಲ್ಲಾ ಕಾಂಗ್ರೆಸ್ ಹೆದರಲ್ಲ ಎಂದು ತಿರುಗೇಟು ನೀಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ಕರ್ನಾಟಕದಲ್ಲಿ ಶೇ. ೪೦ರಷ್ಟು ಕಮಿಷನ ಪಡೆಯುವ ಸರ್ಕಾರವಿದ್ದು, ಇಂಥ ಸರ್ಕಾರವನ್ನು ಕಿತ್ತು ಒಗೆಯಲು ಪತ್ರಿಯೊಬ್ಬ ನಾಗರಿಕರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಬಿಜೆಪಿ ಹೆಸರು ಬದಲಿಸಿ ಭ್ರಷ್ಟ ಜನತಾ ಪಾರ್ಟಿ ಎಂದು ಹಾಗೂ ಬೊಮ್ಮಾಯಿ ಸರ್ಕಾರದ ಹೆಸರು ಬದಲಿಸಿ ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರ ಎಂದು ಹೆಸರಿಡುವುದು ಸೂಕ್ತವಾಗಿದೆ ಎಂದ ಅವರು, ಬಿಜೆಪಿ ಇಡಿ ದೇಶವನ್ನು ಲೋಟಿ ಮಾಡುತ್ತಿದೆ. ಇಂದು ತುಮಕೂರು ಐತಿಹಾಸಿಕ ಈ ಸ್ಥಳದಿಂದ ಪ್ರತಿಯೊಬ್ಬರು ಸಂಕಲ್ಪ ಮಾಡಿ ದೇಶ ಹಾಗೂ ರಾಜ್ಯದಿಂದ ಈ ಭ್ರಷ್ಟ ಬಿಜೆಪಿಯನ್ನು ಓಡಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಮಾತನಾಡಿ, ಭ್ರಷ್ಟ ಸರ್ಕಾರ ನಿರ್ಮೂಲನೆ ಮಾಡಲು ಮಾರ್ಚ್ 9ರಂದು ಬೆಳಗ್ಗೆ 9ರಿಂದ ಬೆಳಗ್ಗೆ 11 ಗಂಟೆಯವರೆಗೆ ರಾಜ್ಯಾದ್ಯಂತ ಬಂದ್ಗೆ ಕರೆ ಕೊಟ್ಟ ಅವರು, 2 ಗಂಟೆ ಕಾಲ ಅಂಗಡಿ ಮುಂಗಟ್ಟು ಮುಚ್ಚಿ ಬಂದ್ಗೆ ಸಹಕರಿಸಲು ಮನವಿ ಮಾಡಿಕೊಂಡರು. ಬಂದ್ ವೇಳೆ ಯಾರಿಗೂ ತೊಂದರೆ ನೀಡಲ್ಲ. ಶಾಂತಿ ರೀತಿಯಿಂದ ಪ್ರತಿಭಟನೆ ಮಾಡಬೇಕು. ವ್ಯಾಪಾರವನ್ನ ಎರಡು ಗಂಟೆಗಳ ಕಾಲ ಅಂಗಡಿ ಮುಗ್ಗಟ್ಟು ಬಂದ್ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಮಾತನಾಡಿದರು. ಇದೇ ವೇಳೆ ಕೊರಟಗೆರೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಾಂಗ್ರೆಸ್ ರಾಜೀವ ಭವನ ಕಟ್ಟಡವನ್ನು ಕೂಡ ಲೋಕರ್ಪಾಣೆ ಮಾಡಲಾಯಿತು. ಈ ವೇಳೆ ಎಐಸಿಸಿ ಸೆಕ್ರೆಟರಿ ಮಯೂರ ಜಯಕುಮಾರ, ಮುಖಂಡರಾದ ಕೆ.ಎಚ್. ಮುನಿಯಪ್ಪ, ಕೆ.ಎನ್. ರಾಜಣ್ಣ, ಎಚ್.ಆಂಜನೇಯ, ಚಂದ್ರಶೇಖರ್ ಗೌಡ, ಸಲಿಂ ಅಹಮ್ಮದ, ಜೆ.ಸಿ ಚಂದ್ರಶೇಖರ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಶಾಸಕ ವೆಂಕಟರಮಣಪ್ಪ, ಕಾಂಗ್ರೆಸ್ ನಾಯಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.