Belagavi News In Kannada | News Belgaum

ಜೀವ ಉಳಿಸಿದ ಮೆಸೇಜು ಮತ್ತು ವಿಚ್ಚೇಧನ ಕೊಡಿಸಿದ ಅಪರಿಚಿತ ಪೋನ ಕರೆಗಳ ಬಗ್ಗೆ ಹುಷಾರು,ನಿಮ್ಮ ಬದುಕಿನ ಕೋಟೆಯೊಂದು ಲೂಟಿಯಾಗುವ ಮುನ್ನ

ಜೀವ ಉಳಿಸಿದ ಮೆಸೇಜು ಮತ್ತು ವಿಚ್ಚೇಧನ ಕೊಡಿಸಿದ ಅಪರಿಚಿತ ಪೋನ ಕರೆಗಳ ಬಗ್ಗೆ ಹುಷಾರು,ನಿಮ್ಮ ಬದುಕಿನ ಕೋಟೆಯೊಂದು ಲೂಟಿಯಾಗುವ ಮುನ್ನ

ಎ ಹೇ ಇವತ್ ನಾ ಉಳಿಯಾಂಗಿಲ್ಲ…
ಎನಿದ್ದು ಏನೈತಿ ಬರೇ ದಿನಾಲು ಇದೆ ಆತು…ಅನ್ನುತ್ತ ಗೂಟಕ್ಕೆ ಹಾಕಿದ್ದ ಹಗ್ಗ ತಗೊಂಡ ರಾಮ್ಯಾ ತನ್ನ ಮನೆಯ ಬೆಡ್ ರೂಮಿನ ಬಾಗಿಲು ಹಾಕಿಕೊಂಡ….

ಹಾಳಾಗಿ ಹೋಗು ಹಾಟ್ಯಾನ ಮಗನ ಎಷ್ಟ ಜೀಂವಾ ತಿಂತಿ ನೀ ಸತ್ರ ತಾಳಿಹರಕೊಂಡು ಕೂಲಿ ನಾಲಿ ಮಾಡಿ ಆದ್ರೂ ಮಕ್ಕಳನ ಸಾಕೊಂಡು ಇರತೆನಿ ಯಾರ ಅಕಿ ಬುಬ್ಬನಿ ನಿನಗ್ ದಿನಾ ಪೋನ್ ಮಾಡ್ತಾಳು ನೀವ್ ಯಾರು ನಂಗ್ ಗೊತ್ತಿಲ್ಲ ಅಂತ ಕೆಳತಾಳು?? ಅಂತ ಅವನ ಹೆಂಡತಿ ಪಾರವ್ವ ಜೋರಾಗಿ ಅಳುತ್ತ ಪಡಸಾಲೆಗೆ ಬಂದು ಕಂಬಕ್ಕೆ ಒರಗಿ ಕುಂತಳು…..ಅತ್ತತ್ತು ಕೆಂಪಾದ ಅವಳ ಕಣ್ಣುಗಳು ನಿರಂತರವಾಗಿ ನದಿಯಂತೆ ಹರಿಯತೊಡಗಿದ್ದವು.

ಹೀಗೆ ಹೆಂಡತಿ ಪಾರವ್ವನ ಜಗಳ ಆದಾಗೆಲ್ಲ ನಮ್ ರಾಮ್ಯಾ ಹಗ್ಗ ತಗೊಂಡು ಬೆಡ್ ರೂಮಿನ ಬಾಗಿಲು ಹಾಕುವದು,ನಾ ಬದುಕಾಂಗಿಲ್ಲ ಇನ್ನ ಸಾಕ ಅವನವ್ವನ ಅಂತ ಸಿಟ್ಟಿನಿಂದ ಕೂಗಾಡುವದು ಮತ್ತು ಪಾರವ್ವ ಜೋರು ಜೋರಾಗಿ ಅಳುವದು ಪಕ್ಕದ ಮನೆಯವರಿಗೆ ಕಾಮನ್ ಆಗಿ ಹೋಗಿತ್ತು….

ಆದರೆ ಅವತ್ತು ರಾಮ್ಯಾ ಒಂದು ದೃಢವಾದ ನಿರ್ಧಾರ ಮಾಡಿಬಿಟ್ಟಿದ್ದ ಸೀಲಿಂಗ್ ಫ್ಯಾನಿಗೆ ಹಗ್ಗ ಬಿಗಿದು ಸ್ಟೂಲಿನ ಮೇಲೆ ನಿಂತು ಕಣ್ಣು ಮುಚ್ಚಿ ಕೊರಳಿಗೆ ಕುಣಿಕೆ ಕಟ್ಟಿಕೊಂಡು ಇನ್ನೆನು ಜಿಗಿದು ಬಿಡಬೇಕು…… ಅಷ್ಟರಲ್ಲೇ ಮೊಬೈಲಿಗೆ ಮೆಸೆಜ್ ಒಂದು ಬಂದು ಬಿದ್ದ ಸದ್ದಾಯಿತು…

ಯಾವ ಮೊಬೈಲಿನಿಂದಾಗಿ ಕಳೆದ ಒಂದು ವಾರದಿಂದ ಜಗಳ ಆರಂಭ ಆಗಿತ್ತೋ ಅದೇ ಮೊಬೈಲ್‌ ಮೆಸೆಜ್ ಸದ್ದು ರಾಮ್ಯಾ ಹಗ್ಗದ ಕುಣಿಕೆಯಿಂದ ಕೆಳಗೆ ಇಳಿದು ನೋಡುವಂತೆ ಮಾಡಿತು….sorry dear ನನ್ನ ಮೊಬೈಲ್ ಸಾಪ್ಟವೇರ್ ಕರಪ್ಟ ಆಗಿತ್ತು ಕಾಂಟ್ಯಾಕ್ಟ್ ಎಲ್ಲಾ ಹೊಂಟುಹೋಗಿದ್ವು ನೀವು ನಂಗೆ ಪೋನ್ ಮಾಡಿದ್ದಾಗ ನಿಮಗೆ ಶಿತ ಆಗಿದ್ದರಿಂದ ನಿಮ್ ಧ್ವನಿ ನನಗೆ ಗುರ್ತು ಸಿಗಲಿಲ್ಲ ಅದಕ್ಕೆ ಯಾರಿದು ಅಂತ ಅಂದ್ರೆ ನೀವು ರಮಾಕಾಂತ್ ಅಂದ್ರಿ ಆವಾಗ್ಲೆ ಹಾಲು ತಂದು ಕೊಡೊ ಹುಡುಗಾ ಬಾಗಿಲ ಬೆಲ್ ಒತ್ತಿದ್ದರಿಂದ ರಮಾಕಾಂತ್ ಅನ್ನುವ ನಿಮ್ಮ ಹೆಸರು ಉಮಾಕಾಂತ ಅಂತ ಕೇಳಿಸಿ ಯಾರೋ ಅಪರಿಚಿತರು ಅಂತ ಪೋನ್ ಕಟ್ ಮಾಡಿದ್ದೆ sorry Anna…..ಅನ್ನುವ ಮೆಸೆಜ್ ಅದು…

ಹೊಗ್ಗೋ ಅವರಪ್ಪನ ಈ ಮೆಸೇಜ್ ಬರೋದು ಒಂದೈದು ನಿಮಿಷ ತಡಾ ಆಗಿದ್ರು ನನ್ನ ಪಿಂಡ ಇಡಾಕ್ ಬರ್ಬೇಕಿತ್ ನೀವು ಅಂತ ರೀಪ್ಲೈ ಮಾಡಿ ಬೆಡ್ ರೂಮಿನ ಬಾಗಿಲು ತೆರೆದುಬಂದ ರಾಮ್ಯಾ ನಾಚಿಕೆಯಿಂದ ತಲೆತಗ್ಗಿಸುತ್ತಲೇ ಪಾರವ್ವನ ಹತ್ತಿರ ಏ ಪಾರೀ ಅರ್ಧ ಕಪ್ ಚಹಾ ಮಾಡು ಅನ್ನುತ್ತಿದ್ದಂತೆಯೆ ಪಾರವ್ವನ ಅಳು ಮತ್ತಷ್ಟು ಜೋರಾಗಿತ್ತು…

ಸ್ನೇಹಿತರೆ ಎಷ್ಟೋ ಸಲ ನಮ್ಮದಲ್ಲದ ತಪ್ಪಿಗೆ ನಾವು ಬಲಿಪಶುಗಳಾಗುತ್ತೇವೆ ಆದ್ದರಿಂದಲೇ ಇದನ್ನ ಕಲಿಗಾಲ ಅನ್ನುತ್ತಾರೆ.ಯಾರದೋ ಒಂದು ಪೋನ್ ಕರೆ ಹಲವರ ಜೀವಹಾನಿಗೆ ಕಾರಣವಾದರೆ ಇನ್ನೂ ಕೆಲವರ ಮಾನ ಹಾನಿಗೂ ಮತ್ತೂ ಕೆಲವರ ಬದುಕಿನ ನೆಮ್ಮದಿಯ ಕೆಡುವದಕ್ಕೂ ಕಾರಣವಾಗಿರೋದು ಇಂದಿನ ಈ ಬರಹದ ಮರ್ಮ.

ಹೌದಲ್ಲವಾ
ಸುಮ್ಮನೆ ಒಮ್ಮೆ ಯೋಚಿಸಿ ನೋಡಿ ನಮಗೆ ಗೊತ್ತಿಲ್ಲದೆಯೊ ಅಥವಾ ಮಕ್ಕಳ ಕೈಗೆ ಮೊಬೈಲ್ ಕೊಟ್ಟಾಗಲೋ ಡಯಲ್ ಆಗುವ ಪೋನುಗಳು ಕೆಲವರಿಗೆ ಕಿರಿಕಿರಿ ಅನ್ನಿಸಿದರೆ ಹಲವು ಸಲ ನಮ್ಮನ್ನೇ ಮುಜಗುರಕ್ಕೆ ಒಳಪಡಿಸುತ್ತವೆ.ಎಷ್ಟೋ ಸಲ ಹಲವರ ಸಂಪರ್ಕಕ್ಕೆ ಬರುವ ಸಂಘಜೀವಿ ಮನುಷ್ಯ ಅವರ ನಂಬರ ತೆಗದುಕೊಂಡಾಗಲೋ ಅಥವಾ ಅವರಿಗೆ ತನ್ನ ನಂಬರ ಕೊಟ್ಟು ಅವರು ಡಯಲ್ ಮಾಡಿದಾಗಲೋ ಅವರ ಹೆಸರನ್ನು ಸೇವ್ ಮಾಡೋದೆ ಇಲ್ಲ ಆದ್ದರಿಂದ ಅವರ ಕರೆ ಬಂದಾಗ ಬಹಳ ಸಲ ನಾವೆಲ್ಲ ಮುಜಗುರಕ್ಕೆ ಒಳಗಾಗುತ್ತೇವೆ.

ಇನ್ನು ಯಾರನ್ನೋ ಸತಾಯಿಸುವದಕ್ಕಾಗಿ,
ಅಥವಾ ಬೇಕಂತಲೇ‌ ಕಾಡುವದಕ್ಕಾಗಿ,ಇಲ್ಲ ಎಪ್ರೀಲ್ ಫೂಲ್ ಮಾಡುವದಕ್ಕಾಗಿ ಕೆಲವು ಹೊಸ ನಂಬರಗಳಿಗೆ ಡಯಲ್ ಮಾಡುವ ನಾವು ಅವುಗಳನ್ನು ನಮ್ಮ ಮೊಬೈಲಿನಲ್ಲಿ ಸೇವ್ ಮಾಡೋದೆ ಇಲ್ಲ.ಇದರ ಪರಿಣಾಮವಾಗಿ ಅತ್ತಲಿಂದ ಪೋನ್ ಕರೆಗಳು ನಮ್ಮ ನಂಬರಿಗೆ ಬಂದಾಗ ಅದರಲ್ಲೂ ಅದು ನಮ್ಮ ವಿರುದ್ದ ಲಿಂಗದ ಧ್ವನಿ ಅಂದರೆ ಪುರುಷರಿಗೆ ಮಹಿಳೆಯರ ಅಥವಾ ಮಹಿಳೆಗೆ ಪುರುಷರ ಅಪರಿಚಿತ ನಂಬರಿನ ಕರೆಗಳು ಬಂದಾಗ ಹಲವು ಸಲ ಎಷ್ಟೋ ಮನೆಗಳಲ್ಲಿ ರಾಮಾಯಣ ಮಹಾಭಾರತಗಳೇ ನಡೆದ ಉದಾಹರಣೆಗಳಿವೆ.

ಪರಸ್ಪರ ಸಂಶಯ ಪಡುವ ಗಂಡ ಅಥವಾ ಹೆಂಡತಿ ಯಾರ ಪೋನು ಅಂತ ಕೇಳಿದಾಗಲೋ ಅಥವಾ ಹೊಸ ನಂಬರ್ ನೋಡಿ ಯಾರಿದು ಅಂದಾಗಲೋ ಅಥವಾ ಅತ್ತ ಕಡೆಯಿಂದ ಬೈ ಮಿಸ್ಟೆಕ್ ರಾಂಗ್ ಡಯಲ್ಡ್ ಆಗಿ ಮಿಸ್ಡ ಕಾಲ್ ಬಿದ್ದಾಗಲೋ ಗಂಡ ಹೆಂಡಿರ ನಡುವೆ ಆರಂಭವಾದ ಪುಟ್ಟ ಜಗಳವೇ ನಿಧಾನಕ್ಕೆ ಒಂದು ದೊಡ್ಡ ಬಿರುಕು ಮೂಡಿಸಿ ವಿಚ್ಚೇಧನದ ಹಂತ ತಲುಪಿದ ಉದಾಹರಣೆಗಳೂ ಇವೆ.

ಎಷ್ಟೋ ಸಲ ಹಲೋ ಸರ್ ನಮಸ್ತೆ ಅಂತ ಪರಿಚಯದವರಿಗೆ ಪೋನ್ ಮಾಡಿದಾಗ ಅವರು ನಮ್ಮೊಂದಿಹೆ ಮಾತನಾಡುತ್ತ ಯಾರಿದು ಅಂತ ಕೇಳಿದರೆ ಮೈ ಎಲ್ಲಾ ಉರಿದು ಹೋಗುತ್ತೆ.

ಯಾವುದಕ್ಕೂ ಹೊಸ ನಂಬರ್ ಒಂದಕ್ಕೆ ಡಯಲ್ ಮಾಡಿದ್ದೀರಿ ಅನ್ನುವದಾದರೆ ಅವರೊಂದಿಗೆ ಮಾತು ಆರಂಭಿಸುವ ಮುನ್ನ ಅವರ ಹೆಸರನ್ನು ಕನ್ಫರ್ಮ ಮಾಡಿಕೊಂಡು ನಾನು ಹೀಗೆ ಈ ಊರಿನಿಂದ ಈ ಹೆಸರಿನ ವ್ಯಕ್ತಿ ಮಾತನಾಡೋದು ಅಂತ ಪರಿಚಯಿಸಿಕೊಂಡರೆ ಒಳ್ಳೆಯದು ಅಲ್ಲವಾ??

ಅಂದ ಹಾಗೇ ಈ ಜಗತ್ತಿನಲ್ಲಿ ಯಾರೂ ಕೂಡ ಫರಪೆಕ್ಟ್ ಅಲ್ಲವೇ ಅಲ್ಲ ಆದ್ದರಿಂದ ಒಂದೊಮ್ಮೆ ನಿಮಗೆ ಅಪರಿಚಿತ ನಂಬರಿನ ಮೆಸೆಜ್ ಬಂದರೆ ಅಥವಾ ಪೋನ್ ಕರೆ ಬಂದರೆ ಯಾವುದಕ್ಕೂ ಒಂದು ಸಲ ಅವರು ಯಾರು ಏನು ಯಾಕೆ ಮೆಸೆಜ್ ಮಾಡಿದ್ದಾರೆ ಅಥವಾ ಕರೆ ಮಾಡಿದ್ದಾರೆ ಅಂತ ವಿಚಾರಿಸಿ ನೋಡಿ.ಅತ್ತಲಿನ ಧ್ವನಿಯ ಮೇಲೆ ನಿಮಗೆ ನಂಬಿಕೆ ಬಂತಾ,ಅವರ ಮೆಸೇಜು ನಿಮ್ಮನ್ನು ಮಿಸ್ ಯೂಜ್ ಮಾಡಿಕೊಳ್ಳುವದಿಲ್ಲ ಅನ್ನಿಸಿತಾ ನಿರಾಳವಾಗಿ ಮುಂದುವರೆಯಿರಿ.
ಅಷ್ಟೇ ಯಾಕೆ ಕೆಲವೊಮ್ಮೆ ನಿಮ್ಮ ನಿರ್ಲಕ್ಷ್ಯವೇ ಅಂತಹ ಆಕಸ್ಮಿಕಗಳಿಗೆ ಮದ್ದಾಗಬಹುದು ಅನ್ನಿಸಿದರೆ ಅಲ್ಲಿಗೆ ಅದನ್ನು ಮರೆತುಬಿಡಿ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿಮಗೆ ಆ ಅಪರಿಚಿತ ನಂಬರಿನಿಂದ ಏನಾದರೂ ಉಪದ್ರವ ಅನ್ನಿಸತೊಡಗಿತಾ ಕೂಡಲೇ ಅಂತಹ ನಂಬರ್ ಬ್ಲಾಕ್ ಮಾಡಿ ಅಥವಾ ಯಾಕ್ರೀ ಎನ್ ಅನ್ಕೊಂಡಿದ್ದೀರಿ ನನ್ನ ಅಂತ ಒಮ್ಮೆ ಜೋರಾಗಿ ರೋಪ್ ಹಾಕಿಬಿಡಿ ಇಷ್ಟಕ್ಕೆ ನಿಮ್ಮ ಅಪರಿಚಿತ ನಂಬರಿನ ಮೆಸೇಜ್ ಮತ್ತು ಪೋನ್ ಕರೆಗಳು ನಿಂತು ಹೋಗಿಬಿಡಬಹುದು.

ಆದರೆ ಯಾವುದಕ್ಕೂ ನಿಮಗೊಂದು ಕರೆ ಬಂದಿದೆ ಅನ್ನುವದಾದರೆ ತೀರ ಬ್ಯೂಜಿ ಇದ್ದರೆ ಆ ಕ್ಷಣಕ್ಕೆ ಕರೆಯನ್ನು ಕಟ್ ಮಾಡಿದರೂ ಕೂಡ ಮೂರು ನಿಮಿಷದ ಅವಧಿಯಲ್ಲಿ ಮತ್ತೆ ಮತ್ತೆ ಕಾಲ್ ಬಂದರೆ ರಿಸೀವ್ ಮಾಡಿ ಆಮೇಲೆ ಪೋನ್ ಮಾಡಲು ತಿಳಿಸಿ.ಆದರೆ ಯಾವುದೇ ಕಾರಣಕ್ಕೂ ಅಪರಿಚಿತ ನಂಬರ್ ಅಂತ ಪೋನ್ ರಿಸೀವ್ ಮಾಡದೆ ಇರಬೇಡಿ.

ಯಾವುದೇ ಕಾರಣಕ್ಕೂ ಯಾರನ್ನೋ ನಿರ್ಲಕ್ಷಿಸುತ್ತ ಓ ಅವನಾ,ಅವಳಾ?? ಪೋನ್ ಮಾಡಿರೋದು ಅದೊಂದು ದೊಡ್ ತಲೆ ನೋವು ಅಂತ ಪೊನ್ ಕಟ್ ಮಾಡಬೇಡಿ ಯಾಕೆಂದರೆ ಅತ್ತಲಿಂದ ಕರೆ ಮಾಡುತ್ತಿರುವ ವ್ಯಕ್ತಿ ನಿಮ್ಮ ಪರಿಚಯದವರ ಅಪಘಾತವಾಗಿ ಅವರನ್ನು ಆಸ್ಪತ್ರೆಗೆ ಸೇರಿಸಿರಬಹುದು,
ಅಥವಾ ಯಾರೋ ಒಬ್ಬರು ಆಕಸ್ಮಿಕವಾಗಿ ಇಹಲೋಕ ತ್ಯಜಿಸಿರುವ ಸುದ್ದಿ ತಿಳಿಸುವದಕ್ಕೋ ಮತ್ತು ಇನ್ಯಾರಿಗೋ ತುರ್ತಾಗಿ ನಿಮ್ಮದೆ ಗುಂಪಿನ ರಕ್ತದ ಅವಶ್ಯಕತೆ ಇರುವ ವಿಷಯ ತಿಳಿಸುವದಕ್ಕೋ ನಿಮಗೆ ಕರೆ ಮಾಡಿರಬಹುದು ಅನ್ನುವದನ್ನ ಯಾವುದೇ ಕಾರಣಕ್ಕೂ ಮರೆಯಬೇಡಿ.

ಹಲವಾರು ಬಾರಿ ಮೊಬೈಲ್ ಸೈಲೆಂಟ್ ಆಗಿ ಪೋನ್ ರಿಸಿವ್ ಮಾಡದೆ ಇದ್ದಾಗ ಕೆಲವರ ಮಿಸ್ಡ ಕಾಲ್ ಬಿದ್ದಿರುತ್ತೆ,ಜೇಬಿನಲ್ಲಿ ಇಟ್ಟುಕೊಂಡಾಗ ಸ್ಕ್ರೀನ್ ಟಚ್ ಮೊಬೈಲಿನಿಂದ ಆಟೋ ಡಯಲ್ ಆಗಿರುತ್ತೆ,ಹೊತ್ತಲ್ಲದ ಹೊತ್ತಿನಲ್ಲಿ ನಮ್ಮ ಮಿಬೈಲ್ ಅಪರಿಚಿತ ನಂಬರಿನಿಂದ ರಿಂಗಣಿಸಿರುತ್ತದೆ ಅಂತಹ ಸಮಯದಲ್ಲಿ ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳದೆ ಸಮಾಧಾನದಿಂದ ಮಾತನಾಡಿದರೆ ಅತ್ತಲಿನ ನೊಂದ ಅಥವಾ ಭಾವುಕವಾದ ಇಲ್ಲವೇ ಒಂದಷ್ಟು ದುಖಃವನ್ನು ನಿಮ್ಮೊಂದಿಗೆ ಹಂಚಿಕೊಂಡು ಹಗುರ ಆಗಬಯಸಿದ ಮನಸ್ಸಿನ ದುಗುಡವಾದರೂ ಆ ಕ್ಷಣದ ಮಟ್ಟಿಗೆ ಕಮ್ಮಿ ಆದೀತು ಅಲ್ಲವೇ??

ಮುಂದೊಮ್ಮೆ ನಿಮ್ಮ ತಪ್ಪಿನ ಅರಿವಾಗಿ ನೀವು ಡಯಲ್ ಮಾಡಿದ ಚಂದಾದಾರರು ಶಾಸ್ವತವಾಗಿ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಅಂತ ಕಂಪ್ಯೂಟರಿನ ಧ್ವನಿಯೊಂದು ಉಲಿಯುವ ಮುನ್ನ ನಿಮ್ಮ ನಂಬರಿಗೆ ಬಂದ ಪೋನ್ ಅಥವಾ ಮೆಸೆಜ್ ಗಳಿಗೆ ಪ್ರತಿಕ್ರಿಯಿಸಿ ಒಂದು ಒಳ್ಳೆಯ ಸಂಭಂಧವನ್ನು ಉಳಿಸಿಕೊಳ್ಳಿ ಅಂದ ಹಾಗೆ ನಾನು ಹೀಗೆಲ್ಲ ಬರೆದಿದ್ದೇನೆ ಅಂತ ಯಾವುದೋ ಅಪರಿಚಿತ ಧ್ವನಿಯ ಮಾಧುರ್ಯಕ್ಕೆ ಸೋತು ನಿಮ್ಮ ಅಕೌಂಟ್ ನಂಬರ್,ಪ್ಯಾನ್ ಕಾರ್ಡ ನಂಬರ್,ಆಧಾರ ಕಾರ್ಡ ನಂಬರ್,ಏಟಿಎಮ್ ಪಿನ್ ಮತ್ತು ಗೂಗಲ್ ಪೇ,ಪೋನ್ ಪೇ ಗಳ ಪಾಸವರ್ಡ ಕೊಟ್ಟು ಹಣ ಕಳೆದುಕೊಳ್ಳಬೇಡಿ.

ಯಾವುದಕ್ಕೂ ನನ್ನದೊಂದು ನಂಬರ್ ನಿಮ್ಮ ಮೊಬೈಲಿನಲ್ಲಿ ಸೇವ್ ಮಾಡಿಕೊಳ್ಳಿ.ಒ‌ಂದು ಬೆಲೆ ಕಟ್ಟಲಾಗದ ಅಣ್ಣ ತಮ್ಮ ಸಹೋದರ ಅಥವಾ ಜಸ್ಟ ಯಾಂಡ್ ಬೆಸ್ಟ ಪ್ರೆಂಢ್ ಆಗುವ ಮೂಲಕ ನನ್ನ ಮತ್ತು ನಿಮ್ಮ ಸಂತಸ ನೆಮ್ಮದಿಗಳು ದ್ವಿಗುಣವಾದರೆ ಅದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು ಅಲ್ಲವಾ?? ಏನಂತೀರಿ….

*ದೀಪಕ ಶಿಂಧೇ*
*9482766018*