Belagavi News In Kannada | News Belgaum

ಕೈ ನಾಯಕರ ಅಸ್ತ್ರ ಪ್ರಯೋಗಕ್ಕೆ ಕಮಲ ನಾಯಕರು ವಿಲವಿಲ

ಬೆಂಗಳೂರು:  ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಆಡಳಿತರೂಢ ಬಿಜೆಪಿಯಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ನಾಯಕರು ಮಾಡಿಕೊಳುತ್ತಿರುವ ಎಡವಟ್ಟುಗಳು, ಮುಖಂಡರಲ್ಲಿನ ಭಿನ್ನಾಭಿಪ್ರಾಯಗಳು ಎಲ್ಲೋ ಒಂದು ಕಡೆ ಕಾಂಗ್ರೆಸ್ ಮುಂದೆ ಮಂಡಿಯೂರುವಂತೆ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕಾಂಗ್ರೆಸ್ ನಾಯಕರು ಮಾಡುತ್ತಿದ್ದ ಆರೋಪಗಳಿಗೆ ತಕ್ಕಂತೆ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ಜನ ಬಿಜೆಪಿ ಬಗ್ಗೆ ತಾತ್ಸಾರ ತಾಳುವಂತೆ ಮಾಡಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಚುನಾವಣೆಗೆ ಮುನ್ನವೇ ತಾವು ಗೆದ್ದೇ ಬಿಟ್ಟಿದ್ದೇವೆ ಎನ್ನುವಂತೆ ಬೀಗುತ್ತಿರುವುದು ಕಾಣಿಸುತ್ತಿದೆ. ಈಗಾಗಲೇ ಚುನಾವಣಾ ಪ್ರಚಾರಗಳಲ್ಲಿ ಕಾಂಗ್ರೆಸ್ ಮುಖಂಡರು ಮುಂದೆ ನಮ್ಮದೇ ಸರ್ಕಾರ ಬರಲಿದ್ದು, ನಿಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆಗಳನ್ನು ನೀಡುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕಾಂಗ್ರೆಸ್‌ ಪ್ರಣಾಳಿಕೆಗೆ ಮೆಚ್ಚಿದ ಜನ: ಇನ್ನು ಆಡಳಿರೂಢ ಬಿಜೆಪಿ ಜನಪ್ರಿಯ ಬಜೆಟ್ ಮಂಡಿಸಿದರೂ ಅದು ಜನರಿಗೆ ತಲುಪಿದಂತೆ ಕಾಣುತ್ತಿಲ್ಲ. ಬದಲಿಗೆ ಜನ ಕಾಂಗ್ರೆಸ್ ನೀಡಿರುವ 200 ಯೂನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ 2000 ರೂ ಸಹಾಯಧನದ ಭರವಸೆಗಳನ್ನೇ ಮೆಚ್ಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಆದರೆ ಈ ಬಾರಿ ಬಿಜೆಪಿಗಿಂತಲೂ ಚೆನ್ನಾಗಿ ಸೋಷಿಯಲ್ ಮೀಡಿಯಾವನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿರುವುದು ಎದ್ದು ಕಾಣಿಸುತ್ತಿದೆ.
ಕೈಗೆ ವರದಾನವಾದ ಲೋಕಯುಕ್ತ ದಾಳಿ:  ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಆರೋಪಕ್ಕೆ ಪೂರಕವಾಗುವಂತೆ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಲೋಕಾಯುಕ್ತ ದಾಳಿ ವೇಳೆ ನಗದು ಸಹಿತ ಸಿಕ್ಕಿ ಬಿದ್ದಿರುವುದು. ಮತ್ತು ಈ ಸಂಬಂಧ ನಡೆಯುತ್ತಿರುವ ವಿದ್ಯಮಾನಗಳು ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿದರೆ, ಬಿಜೆಪಿ ನಾಯಕರನ್ನು ವಿಲವಿಲ ಒದ್ದಾಡುವಂತೆ ಮಾಡಿದೆ. 40% ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಾ ಬಂದರಾದರೂ ಅದರ ಬಗ್ಗೆ ಬಿಜೆಪಿ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಕಾಂಗ್ರೆಸ್ ಅದನ್ನೇ ಮುಂದಿಟ್ಟುಕೊಂಡು ಆಡಳಿತ ವಿರೋಧಿ ಅಲೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.
ಬಿಜೆಪಿಯನ್ನು ತಲ್ಲಣಗೊಳಿಸಿದ ರಾಜಕೀಯ ಬೆಳವಣಿಗೆ: ಈಗ ಬಿಜೆಪಿ ರಾಜ್ಯದಲ್ಲಿ ಸೊರಗುತ್ತಿದೆ. ಒಂದೆಡೆ ಲಿಂಗಾಯಿತರು ಪಕ್ಷದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಭ್ರಷ್ಟಾಚಾರದ ಆರೋಪಗಳು, ಪಿಎಸ್‌ಐ ನೇಮಕಾತಿ ಹಗರಣ, ಹಿಂದೂ ಕಾರ್ಯಕರ್ತರ ಕೊಲೆ, ಸಿಡಿದೆದ್ದ ಹಿಂದೂ ಕಾರ್ಯಕರ್ತರು ಹೀಗೆ ಒಂದೇ ಎರಡೇ ಹತ್ತಾರು ವಿಚಾರಗಳು ಆಡಳಿತರೂಢ ಬಿಜೆಪಿಯನ್ನು ತಲ್ಲಣಗೊಳಿಸಿದೆ. ಅದರಲ್ಲೂ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮತ್ತು 40% ಕಮಿಷನ್‌ ಆರೋಪ ತಾರ್ಕಿಕ ಅಂತ್ಯ ಕಾಣದೆ ಹೋದುದರಿಂದ ಅದು ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ಗೆ ಪ್ರಬಲ ಅಸ್ತ್ರವಾಗಿಯೇ ಉಳಿದು ಹೋಗಿದೆ. ಈಗಾಗಲೇ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಎಬ್ಬಿಸಿರುವ ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕುವುದು ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ರಾಷ್ಟ್ರಮಟ್ಟದ ನಾಯಕರಿಗೂ ಕಷ್ಟವಾಗಿದೆ. ಮುಖ್ಯವಾಗಿ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪ್ರಯೋಗಿಸಿರುವ ರಾಜಕೀಯ ಅಸ್ತ್ರಗಳು ಬಿಜೆಪಿಯನ್ನು ಇನ್ನಿಲ್ಲದಂತೆ ಕಾಡುತ್ತಿರುವುದಂತು ನಿಜ.  ಹಾಗಾದರೆ ಕಾಂಗ್ರೆಸ್‌ಅನ್ನು ಮಣಿಸುವ ಅಸ್ತ್ರಗಳು ಬಿಜೆಪಿ ಬಳಿ ಇದೆಯಾ? ಕಾದು ನೋಡಬೇಕಿದೆ.///////