Belagavi News In Kannada | News Belgaum

ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿ ಮೂರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಬೆಳಗಾವಿ: ವಿಶ್ವ ಮಹಿಳಾ ದಿನವೇ  ಮೂವರು ಹೆಣ್ಣು ಮಕ್ಕಳಿಗೆ ವಿಷ ಕುಡಿಸಿದ ಮಹಿಳೆ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಜನತಾ ಪ್ಲ್ಯಾಟ್ ನಿವಾಸಿ ಸರಸ್ವತಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ ತನ್ನ ಪತಿಯ ಜೊತೆ ಬೆಳಗಾವಿ ಅನಗೋಳದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪತಿ ಅದೃಶ್ಯಪ್ಪ ಕೈ ತುಂಬಾ ಸಾಲ ಮಾಡಿಕೊಂಡು ಮನೆ ಬಿಟ್ಟು ಪರಾರಿಯಾಗಿದ್ದಾರೆ. ಸರಸ್ವತಿ, ತುತ್ತು ಅನ್ನಕ್ಕೂ ಗತಿಯಿಲ್ಲದೇ ಜಿಲ್ಲಾಧಿಕಾರಿ ಭೇಟಿಗಾಗಿ ಆಗಮಿಸಿದ್ದರು. ಜಿಲ್ಲಾಧಿಕಾರಿ ‌ಕಚೇರಿಯಲ್ಲಿ ಸರಸ್ವತಿ ತನ್ನ ಜೊತೆಗೆ ಮಕ್ಕಳಾದ ಸೃಷ್ಟಿ (14), ಸಾಕ್ಷಿ (8) ಸಾನ್ವಿಗೆ (3) ವಿಷ ಕುಡಿಸಿದ್ದಾರೆ ಎನ್ನಲಾಗಿದೆ.

ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಮಕ್ಕಳನ್ನು ವಿಚಾರಿಸಿದಾಗ ಜ್ಯೂಸ್ ಎಂದು ನನ್ನ ತಾಯಿ ಏನೋ ಕುಡಿಸಿದ್ದಾಳೆಂದು ಹೇಳಿಕೊಂಡಿದ್ದಾರೆ. ನಂತರ ಸರಸ್ವತಿ ಹಾಗೂ ಮೂವರು ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದಾಗ ಎಲ್ಲರೂ ಗಾಬರಿಯಾಗಿದ್ದಾರೆ. ತಕ್ಷಣವೇ ಡಿಸಿ ಕಚೇರಿಯ ಪೊಲೀಸರು ಅಸ್ವಸ್ಥರನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಸರಸ್ವತಿ ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.///////