Belagavi News In Kannada | News Belgaum

ಉಪ ಅರಣ್ಯ ಸಂರಕ್ಷಣಾಧಿಕಾರಿ ಲೋಕಾಯುಕ್ತ ಬಲೆಗೆ

ಮಡಿಕೇರಿ: ಕೆಳ ಮಟ್ಟದ ಅಧಿಕಾರಿಯಿಂದಲೇ ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಸಾಮಾಜಿಕ ಅರಣ್ಯ ವಲಯ ಡಿಎಫ್‌ಓ ಪೂರ್ಣಿಮಾ ಬಂಧಿತ ಆರೋಪಿ. ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಮಯೂರ ಉದಯ ಕಾರವೇಕರ ಎಂಬವರಿಂದ ಲಂಚ ಪಡೆಯುತ್ತಿರುವ ಆರೋಪದ ಮೇಲೆ ಪೂರ್ಣಿಮಾ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಹೊದ್ದೂರು ವಾಟೆಕಾಡು ನರ್ಸರಿಯಲ್ಲಿ ಕರ್ತವ್ಯ ನಿರ್ವಹಿಸಲು ಇಬ್ಬರು ವಾಚರ್‌ಗಳನ್ನು ನೇಮಿಸಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಅದರಂತೆ ಒಬ್ಬರು ವಾಚರ್‌ನ್ನು ನೇಮಿಸಿಕೊಂಡು ಸರ್ಕಾರದ ನಿಯಮದಂತೆ ತಿಂಗಳಿಗೆ 5000 ರೂ. ವೇತನ ನೀಡಲಾಗುತ್ತಿದೆ ಎನ್ನಲಾಗಿದೆ. ಆದರೆ, ಡಿಎಫ್‌ಓ ಪೂರ್ಣಿಮಾ ಇನ್ನೊಬ್ಬ ವಾಚರ್‌ನ್ನು ನೇಮಿಸಿಕೊಂಡಂತೆ ಸುಳ್ಳುದಾಖಲೆ ಸೃಷ್ಟಿಮಾಡಿ ವಾಚರ್‌ನ ಪ್ರತಿ ತಿಂಗಳ ವೇತನವನ್ನು ತನಗೆ ಕೊಡುವಂತೆ ಒತ್ತಾಯಿಸುತ್ತಿದ್ದರು ಎಂದು ಮಯೂರ ಉದಯ ಕಾರವೇಕರ ಆರೋಪಿಸಿದ್ದಾರೆ.

ಅಲ್ಲದೆ, ಇಲಾಖಾ ವತಿಯಿಂದ 02 ಕಾಮಗಾರಿಗಳನ್ನು ನಡೆಸಿದ್ದು, ಕಾಮಗಾರಿಯ ಒಟ್ಟು ಮೊತ್ತ ಸುಮಾರು 1,60,000 ಗಳಾಗಿವೆ. ಆ ಕಾಮಗಾರಿಗಳ ಮೊತ್ತದ 60 ಪರ್ಸೆಂಟ್ ಹಣವನ್ನು ಅಂದರೆ ಸುಮಾರು 1 ಲಕ್ಷ ರೂ. ತಂದುಕೊಡುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಕಾಮಗಾರಿಗಳನ್ನು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸಿದ್ದು, ಯಾವುದೇ ಲಂಚವನ್ನು ಸ್ವೀಕರಿಸದ ಕಾರಣ 60 ಪರ್ಸೆಂಟ್ ಲಂಚ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದಾಗ ಡಿಎಫ್‌ಓ ಅಸಮಾಧಾನಗೊಂಡು ಸಾರ್ವಜನಿಕವಾಗಿ ಬೈಯುತ್ತಿದ್ದರಲ್ಲದೆ, ರಿಪೋರ್ಟ್ ಹಾಕಿ ಸಸ್ಪೆಂಡ್ ಮಾಡಿಸುವುದಾಗಿ ಬೆದರಿಸುತ್ತಿದ್ದರು ಎಂದು ಮಯೂರ ಉದಯ ಕಾರವೇಕರ ಆರೋಪಿಸಿದ್ದಾರೆ.

ಲಂಚವನ್ನು ಕೊಡಲೇ ಬೇಕು ಎಂದು ಒತ್ತಾಯಿಸಿದಾಗ ಮುಂಗಡವಾಗಿ 50,000 ಹಣವನ್ನು ನೀಡಿರುತ್ತಾರೆ. ಆರೋಪಿತರು 60 ಪರ್ಸೆಂಟ್ ಲಂಚಕ್ಕೆ ಒತ್ತಾಯಿಸಿದ ಸಂಭಾಷಣೆಯನ್ನು ತಮ್ಮ ಮೋಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದು, ಲಂಚಕೊಡಲು ಇಷ್ಟ ಇಲ್ಲದ ಕಾರಣ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಗುರುವಾರ ಮಡಿಕೇರಿ ಅರಣ್ಯ ಭವನ ಆವರಣದಲ್ಲಿ ಡಿಎಫ್‌ಓ ಪೂರ್ಣಿಮಾರವರ ಸೂಚನೆಯಂತೆ ರೂ.50,000 ಹಣದ ಕವರನ್ನು ಆರೋಪಿಯೂ ಜೀಪಿನಲ್ಲಿ ಇಡುವಾಗ ತನಿಖಾಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಅಪರ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಪೊಲೀಸ್ ಮಹಾನಿರೀಕ್ಷಕ ಎ ಸುಬ್ರಮಣ್ಯೇಶ್ವರ ರಾವ್, ಮೈಸೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್‌ಬಾಬು ಮತ್ತು ಮಡಿಕೇರಿ ಲೋಕಾಯುಕ್ತ ಡಿವೈಎಸ್‌ಪಿ ಎಂ.ಎಸ್. ಪವನ್ ಕುಮಾರ್, ಮೈಸೂರು ಲೋಕಾಯುಕ್ತ ಡಿವೈಎಸ್‌ಪಿ ಕೃಷ್ಣಯ್ಯ.ವಿ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲೆಯ ಪೊಲೀಸ್ ನಿರೀಕ್ಷಕ ಲೋಕೇಶ ಹಾಗೂ ಮೈಸೂರು ಜಿಲ್ಲೆಯ ಪೊಲೀಸ್ ನಿರೀಕ್ಷಕಿ ಜಯರತ್ನ ಸೇರಿದಂತೆ ಕೊಡಗು ಜಿಲ್ಲೆಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು./////