ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಯಮಕನಮರಡಿ: ಮಹಿಳೆಯರು ಸಾಮಾಜಿಕವಾಗಿ ಸಬಲೀಕರಣ ಹೊಂದಿದಾಗ ಮಾತ್ರ ಆರ್ಥಿಕ ಸದೃಢತೆ ಹೊಂದಲು ಸಾಧ್ಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಹತ್ತರಗಿ ಗ್ರಾಮದಲ್ಲಿ ಜಿಪಂ ಬೆಳಗಾವಿ, ತಾಪಂ ಹುಕ್ಕೇರಿ, ಗ್ರಾಪಂ ಹತ್ತರಗಿ ಹಾಗೂ ಗ್ರಾಮ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಟಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಸಬಲೀಕರಣ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಮಹಿಳಾ ಸಂಘಟನೆಯ ಮೂಲಕ ಮಹಿಳೆಯರು ಆತ್ಮವಿಶ್ವಾಸದ ಮೂಲಕ ಸ್ವಯಂ ಉದ್ಯೋಗವನ್ನು ಮೆಗೂಡಿಸಿಕೊಳ್ಳಬೇಕು. ಆಗ ಮಾತ್ರ ಮಹಿಳೆಯರಲ್ಲಿರುವ ಅಂಜಿಕೆ, ಹಿಂಜರಿಕೆ, ಮನೋಭಾವ ದೂರವಾಗಿ ಆತ್ಮಸ್ಥೆರ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಹಿಳೆಯರು ಕೇವಲ ಕುಟುಂಬ ನಿರ್ವಹಣೆ ಎಂದು ಬಿಂಬಿಸುತ್ತಿದ್ದ ಕಾಲ ಬದಲಾಗದೆ. ಮಹಿಳೆಯರು ಕೂಡ ಸಾಮಾಜಿಕ, ಆರ್ಥಿಕ ಸದೃಢತೆ ಹೊಂದಲು ಸಾಧ್ಯ ಎಂದು ಮಹಿಳಾ ಸಂಘಟನೆಗಳು ತೋರಿಸಿಕೊಟ್ಟಿವೆ. ಆದ್ದರಿಂದ ಈ ಸಂಘಟನೆಗಳ ಮೂಲಕ ಜಾಗೃತಿ ಹೊಂದಲು ವಿಚಾರ ವಿನಿಮಯ, ಅಧ್ಯಯನ ಶಿಬಿರ, ಮಾಹಿತಿ ಸಂಗ್ರಹ, ಪ್ರತಿಭೆಗಳ ಅನಾವರಣ ಕಾರ್ಯಕ್ರಮಗಳನ್ನು ರೂಪಿಸಿ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಶಾಸಕ ಸತೀಶ್ ಜಾರಕಿಹೊಳಿ ಅವರು ಹತ್ತರಗಿಯ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಕುರ್ಚಿ ಹಾಗೂ ಸೌಂಡ್ ಸಿಸ್ಟಮ್ ವಿತರಿಸಿದರು.
ಹರಿ ಮಂದಿರದ ಆನಂದಗೋಸಾವಿ ಮಹಾರಾಜರು, ಹತ್ತರಗಿ ಕಾರಿ ಮಠದ ಗುರುಸಿದ್ದ ಮಹಾಸ್ವಾಮೀಜಿಗಳು ಕಾರ್ಯಕ್ರದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ದಸ್ತಗಿರ ಬಸಾಪುರೆ, ರವೀಂದ್ರ ಜಿಂಡ್ರಾಳೆ, ಮಹಾದೇವ ಪಟೋಳಿ, ಜೋಮನಿಂಗ್ ಪಟೀಲಿ, ಶಶಿಕಾಂತ ಹಟ್ಟಿ, ಹತ್ತರಗಿ ಗ್ರಾಪಂ ಸದಸ್ಯರು, ಗ್ರಾಮ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು, ಹತ್ತರಗಿ ಗ್ರಾಮದ ಗುರು-ಹಿರಿಯರು, ಕಾಂಗ್ರೆಸ್ ಮುಖಂಡರು ಇದ್ದರು.