ಮದುವೆಗೆ ವಿರೋಧ; ಬೆಟ್ಟದಿಂದ ಹಾರಿ ಪ್ರೇಮಿಗಳು ಆತ್ಮಹತ್ಯೆ

ಮುಂಬೈ: ಮನೆಯಲ್ಲಿ ಮದುವೆಗೆ ವಿರೋಧಿಸಿದ್ದರಿಂದ ಯುವ ಪ್ರೇಮಿಗಳಿಬ್ಬರು ಬೆಟ್ಟದ ತುದಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ಸಮತಾ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇಬ್ಬರೂ ನೆರೆಹೊರೆಯವರಾಗಿದ್ದು, ಮನೆಯವರು ಮದುವೆಗೆ ನಿರಾಕರಿಸಿದ್ದರಿಂದ ಯುವಕ ಆಕಾಶ್ ಜಾಟೆ (21) ಹಾಗೂ 16 ವರ್ಷದ ಬಾಲಕಿ ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿಂದಿನ ರಾತ್ರಿ ಅಪ್ರಾಪ್ತೆ ಮನೆಯಿಂದ ನಾಪತ್ತೆಯಾಗಿದ್ದಳು. ಎಷ್ಟು ಹುಡುಕಾಡಿದರೂ ಸಿಗದೇ, ಕೊನೆಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಕಿಡ್ನ್ಯಾಪ್ ಕೇಸ್ ದಾಖಲಿಸಿಕೊಂಡಿದ್ದರು.
ಆಕೆ ತನ್ನ ಸ್ನೇಹಿತನೊಂದಿಗೆ ಹೊರಗೆ ಹೋಗಿದ್ದಳು ಅನ್ನೋದು ನಂತರ ನಡೆದ ತನಿಖೆಯಲ್ಲಿ ತಿಳಿದು ಬಂದಿತ್ತು. ಅಲ್ಲದೇ ಆಕೆಯ ಪ್ರೇಮಿಯೂ `ನಾನು ಹೋಗುತ್ತಿದ್ದೇನೆ ಮತ್ತೆ ಎಂದಿಗೂ ಹಿಂತಿರುಗುವುದಿಲ್ಲ’ ಎಂದು ತನ್ನ ಮೊಬೈಲ್‌ನಿಂದ ಕುಟುಂಬದವರಿಗೆ ಸಂದೇಶ ಕಳುಹಿಸಿರುವುದೂ ಪತ್ತೆಯಾಗಿತ್ತು.
ಶುಕ್ರವಾರ ಮಧ್ಯಾಹ್ನ 12:30ರ ಸುಮಾರಿಗೆ ಸಮತಾನಗರದಲ್ಲಿ ಅಪರಿಚಿತ ಶವಗಳು ಪತ್ತೆಯಾಗಿದ್ದು, ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ನಡೆದ ತನಿಖೆಯಲ್ಲಿ ಗುರುತು ಪತ್ತೆಯಾಗಿದೆ.