ಆರು ಜಾನುವಾರುಗಳನ್ನು ಬಲಿ ಪಡೆದ ಚಿರತೆ

ಕಾರವಾರ: ಹೊನ್ನಾವರದ ಕೆಲವು ಗ್ರಾಮಗಳಲ್ಲಿ ಮತ್ತೆ ಚಿರತೆ ಕಾಟ ಪ್ರಾರಂಭವಾಗಿದೆ. ಎರಡು ದಿನಗಳಲ್ಲಿ ಆರು ಜಾನುವಾರುಗಳನ್ನು ಬಲಿ ಪಡೆದು ಜನರಲ್ಲಿ ಆತಂಕ ಮೂಡಿಸಿದೆ.
ಕಳೆದ ಒಂದು ವಾರದಿಂದ ಸಾಲ್ಕೋಡು, ಕೊಂಡಕುಳಿ, ಕೆರೆಮನೆ ಪ್ರದೇಶದಲ್ಲಿ ಚಿರತೆ ತಿರುಗಾಡುತ್ತಿದೆ. ಗಣಪಗೌಡ ಹಾಗೂ ಬೆಳ್ಳಗೌಡ ಎಂಬುವವರ ತಲಾ 1 ಕರು, ಸುನೀಲ್ ಆಚಾರಿ ಹಾಗೂ ಬಾಬು ಹಳ್ಳೇರ್ ಅವರ ತಲಾ 2 ಜಾನುವಾರನ್ನು ಕೊಂದುಹಾಕಿದೆ.
ಜಾನುವಾರುಗಳನ್ನು ಬಲಿ ಪಡೆಯುವ ಮುನ್ನ ಶನಿವಾರ ಎರಡು ಜಿಂಕೆಗಳನ್ನು ಕೊಂದಿತ್ತು. ಮತ್ತೆ ಪ್ರತ್ಯಕ್ಷವಾದ ಚಿರತೆಯಿಂದ ಸ್ಥಳೀಯರು ನಿತ್ಯದ ಕೆಲಸ ಕಾರ್ಯಗಳಿಗೆ ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಕೃಷಿಕರು ತಮ್ಮ ರಾಸುಗಳನ್ನು ಕಳೆದುಕೊಳ್ಳುವಂತಾಗಿದೆ. ಕೂಡಲೇ ಚಿರತೆ ಸೆರೆ ಹಿಡಿದು ಬೇರೆಡೆ ಬಿಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ./////