ಲಕ್ಷ್ಮೀ ಹೆಬ್ಬಾಳಕರ್ ಶ್ರಮ ಸಾರ್ಥಕ; ಕನಸು ನನಸು: ಒಂದೇ ವಾರದಲ್ಲಿ ಅದ್ಭುತ ಪ್ರವಾಸಿ ತಾಣವಾದ ರಾಜಹಂಸಗಡ


ಲಕ್ಷ್ಮೀ ಹೆಬ್ಬಾಳಕರ್ ಶಾಸಕರಾದ ದಿನದಿಂದಲೇ ರಾಜಹಂಸಗಡ ಕೊಟೆಯನ್ನು ಪರಿಪೂರ್ಣ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕೆನ್ನುವ ಕನಸು ಹೊತ್ತಿದ್ದರು. ಅಲ್ಲಿ ರಾಷ್ಟ್ರದಲ್ಲೇ ಭವ್ಯವಾದ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸಬೇಕೆನ್ನುವ ಗುರಿ ಇಟ್ಟುಕೊಂಡು ಕೆಲಸ ಮಾಡಿದರು. ಯಾವ ಅಡ್ಡಿ, ಆತಂಕಕ್ಕೂ ಬಗ್ಗದೆ ನಿರಂತರ ಪ್ರಯತ್ನ ಮಾಡಿ ಯಶಸ್ವಿಯಾದರು. ಮಾರ್ಚ್ 5ರಂದು ನವೀಕೃತ ಸಿದ್ದೇಶ್ವರ ಮಂದಿರ ಮತ್ತು ಬೃಹತ್ ಛತ್ರಪತಿ ಶಿವಾಜಿ ಮೂರ್ತಿ ಶಾಸ್ತ್ರೋಕ್ತವಾಗಿ ಉದ್ಘಾಟನೆಯಾಯಿತು.
ಉದ್ಘಾಟನೆಯ ದಿನವೇ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಜನರು ಆಗಮಿಸಿ, ಹರ್ಷೋದ್ಘಾರಗೈದಿದ್ದರು. ಅಲ್ಲಿಂದ ಪ್ರತಿನಿತ್ಯ 2 -3 ಸಾವಿರ ಪ್ರವಾಸಿಗರು ಆಗಮಿಸಿ, ಖುಷಿಪಡುತ್ತಿದ್ದಾರೆ. ಹಿಂದೆ ಯಾರಿಂದಲೂ ಆಗದ ಕೆಲಸವನ್ನು ಮಾಡಿದ್ದಕ್ಕಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. ಭಾನುವಾರ ಬೆಳಗ್ಗೆಯಿಂದಲೇ ಸಾಲುಗಟ್ಟಿ ವಾಹನಗಳು ರಾಜಹಂಸಗಡದ ಕಡೆಗೆ ಆಗಮಿಸುತ್ತಿದ್ದವು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಆಗಮಿಸಿ ಸಂಭ್ರಮಿಸಿದರು.
ಮುಂದಿನ ದಿನಗಳಲ್ಲಿ ರಾಜಹಂಸಗಡ ರಾಷ್ಟ್ರದಲ್ಲೇ ಒಂದು ಅತ್ಯುತ್ತಮ ಮತ್ತು ಅಪರೂಪದ ಪ್ರವಾಸಿ ತಾಣವಾಗಿ ಬೆಳೆಯುವ ಸೂಚನೆ ವಾರದಲ್ಲೇ ಕಾಣಿಸಿದೆ. ಇನ್ನೂ ಕೆಲವೊಂದು ಸಣ್ಣ ಪುಟ್ಟ ಕೆಲಸಗಳಾಗಬೇಕಿದ್ದು, ಅವುಗಳ ಕಡೆಗೆ ಲಕ್ಷ್ಮೀ ಹೆಬ್ಬಾಳಕರ್ ಗಮನಹರಿಸಿದ್ದಾರೆ. ಸಿದ್ದೇಶ್ವರ ಮಂದಿರವನ್ನು ಇನ್ನೂ ಸ್ವಲ್ಪ ಅಭಿವೃದ್ಧಿಪಡಿಸಬೇಕಿದೆ. ಅಲ್ಲೊಂದು ಸಣ್ಣ ವಾಟರ್ ಫಾಲ್ಸ್ ಮಾಡುವ ಯೋಜನೆ ಹೊಂದಿದ್ದಾರೆ. ಸಣ್ಣಪುಟ್ಟ ಕೆಲಸವನ್ನು ಆದಷ್ಟು ಬೇಗ ಮಾಡಿಸುವ ಯೋಜನೆಯನ್ನು ಅವರು ರೂಪಿಸಿದ್ದಾರೆ.
ಒಟ್ಟಾರೆ, ಲಕ್ಷ್ಮೀ ಹೆಬ್ಬಾಳಕರ್ ಅವರ ಕನಸು ನನಸಾಗಿದೆ, ಶ್ರಮ ಸಾರ್ಥಕವಾಗಿದೆ. ಅವರ ಕೆಲಸಕ್ಕೆ ಎಲ್ಲೆಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.
ರಾಜಹಂಸಗಡವನ್ನು ಧಾರ್ಮಿಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕೆಂದು ದೊಡ್ಡ ಕನಸು ಕಂಡಿದ್ದೆ. ಈಗ ನನಗೆ ಖುಷಿಯಾಗುತ್ತಿದೆ. ಎಲ್ಲರ ಸಹಕಾರದಿಂದ ಈ ಕೆಲಸ ಪೂರ್ಣಗೊಂಡಿದೆ. ಅಲ್ಲಿ ಪ್ರವಾಸಿಗರಿಗಾಗಿ ಇನ್ನಷ್ಟು ಮೂಲಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸುತ್ತೇನೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
-ಲಕ್ಷ್ಮೀ ಹೆಬ್ಬಾಳಕರ್, ಶಾಸಕರು