ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲ ಅನ್ನೋದಾದ್ರೆ ನಮಗೂ ಬೇಡ ಎಂದ ಸಚಿವ ವಿ. ಸೋಮಣ್ಣ

ಬೆಂಗಳೂರು: ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ನಿಂತ್ಕೊತೀನಿ, ಇಲ್ಲ ಅಂದ್ರೆ ಇಲ್ಲ. ನಾನು ಯಾವತ್ತಾದ್ರೂ ನನ್ನ ಮಗನಿಗೆ ಟಿಕೆಟ್ ಕೇಳಿದ್ದೀನಾ ಎಂದು ಸಚಿವ ವಿ. ಸೋಮಣ್ಣ ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಇವೆಲ್ಲ ಇರುತ್ತೆ. ಏನು ಹೇಳಬೇಕು, ಎಲ್ಲಿ ಹೇಳಬೇಕೋ ಹೇಳಿದ್ದೀನಿ. ಕವಲುದಾರಿಗಳು ಇರುತ್ತವೆ. ನಾನೇನು ಸನ್ಯಾಸಿ ಅಲ್ಲ. ಡಿಕೆಶಿ, ಸಿದ್ದರಾಮಯ್ಯ ನಾವೆಲ್ಲ ಸ್ನೇಹಿತರು. ನಾವು ಒಟ್ಟಿಗೆ ಕೆಲಸ ಮಾಡಿದ್ದೀವಿ. ಅವರ ಕೆಲಸ ಅವರು ಮಾಡ್ತಾರೆ, ನನ್ನ ಕೆಲಸ ನಾನು ಮಾಡ್ತೀನಿ. ನನಗೆ ಅಸಮಾಧಾನ ಇದೆ ಅಂತಾ ನಾನು ಹೇಳಿಲ್ಲ ಎಂದರು.
ನನ್ನ ಬೆಂಗಳೂರಿಗೆ ಮಾತ್ರ ಏಕೆ ಸೀಮಿತ ಮಾಡ್ತೀರಾ ಎಂದು ಇದೇ ವೇಳೆ ಪ್ರಶ್ನಿಸಿದ ಸೋಮಣ್ಣ, ನನಗೆ ಕೊಟ್ಟ ಜವಾಬ್ದಾರಿಗಳೆಲ್ಲವನ್ನೂ ನಿರ್ವಹಿಸಿದ್ದೇನೆ. ಉಪಚುನಾವಣೆಗಳ ಜವಾಬ್ದಾರಿ, ತುಮಕೂರು ಲೋಕಸಭೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದೇನೆ. ನಾನು ಮೊದಲು ಕಾಂಗ್ರೆಸ್‍ನಲ್ಲೇ ಇದ್ದೆ, ಜನತಾ ಪಾರ್ಟಿ, ಜನತಾದಳದಲ್ಲೂ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ಹೀಗೆಲ್ಲ ಆಗ್ತಿರುತ್ತವೆ. ನನ್ನ ಮಗನಿಗೆ ಟಿಕೆಟ್ ಕೇಳಿದ್ದೀನಾ..!? ನಾಲ್ಕು ಗೋಡೆ ಮಧ್ಯೆ ಯಾರಿಗೆ ಏನ್ ಹೇಳಬೇಕು ಹೇಳಿದ್ದೀನಿ ಎಂದು ಗರಂ ಆದರು.
ಅಭಿಮಾನಿಗಳು ಸಭೆ ಮಾಡಿದ್ರೆ ನಾನು ಮಾಡಬೇಡಿ ಅಂತ ಹೇಳೋಕೆ ಆಗುತ್ತಾ..? ರಾಜಕಾರಣ ಅಂದ್ರೆ ಬೆಂಗಳೂರಿಗೆ ಅಷ್ಟೆ ಸೀಮಿತ ಆಗಬೇಕಾ..? ಚುನಾವಣೆ ಬಂದಾಗ ನನ್ನ ಇಡೀ ರಾಜ್ಯಕ್ಕೆ ಕರೆಸ್ತಾರೆ. ಎಲ್ಲಾ ಕ್ಷೇತ್ರ ಗೆಲ್ಲಿಸಿಕೊಂಡೇ ಬಂದಿದ್ದೀನಿ. ಪಕ್ಷ ಏನು ಹೇಳುತ್ತೋ ನಾನು ಅದನ್ನು ಮಾಡ್ತೀನಿ. ರಾಜಕಾರಣ ಇದು ಖುಷಿ ಇದ್ಯೋ ಇಲ್ವೋ ಗೊತ್ತಿಲ್ಲ. ಅರ್ಹತೆ ಇರುವವರಿಗೆ ಕೆಲವು ಸಲ ಕವಲು ದಾರಿ ಆಗ್ತಾವೆ. 56 ವರ್ಷ ನಾನು ಬೆಂಗಳೂರಿಗೆ ಬಂದು. ಅನೇಕ ತೊಡಕುಗಳನ್ನೂ ನೋಡಿದ್ದೇವೆ. ಕೆಲಸ ಮಾಡೋವ್ರನ್ನ ಜನ ಗೌರವಿಸ್ತಾರೆ ಅಂದರೆ ಅದಕ್ಕೆ ಉದಾಹರಣೆ ಅಂದರೆ ಸೋಮಣ್ಣ ಎಂದರು.
ಬೇರೆ ರಾಜಕಾರಣಿ ಮಕ್ಕಳು ರಾಜಕಾರಣದಲ್ಲಿ ಇರಬಹುದು. ಎಲ್ಲರಿಗೂ ಮಕ್ಕಳು, ಪ್ರೀತಿ ಅನ್ನೋದು ಇರುತ್ತೆ. ನನಗೆ ಇರುವ ನಿಯಮ ಎಲ್ಲರಿಗೂ ಅನ್ವಯಿಸಬೇಕಲ್ವ. ನಾನು ಯಾವತ್ತೂ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ. ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲ ಅನ್ನೋದಾದ್ರೆ ನಮಗೂ ಬೇಡ. ಅವಕಾಶ, ಹಣೆಬರಹ ಇದ್ದರೆ ಮಗನಿಗೆ ಟಿಕೆಟ್ ಸಿಗುತ್ತದೆ, ನಾನು ಯಾರನ್ನ ಕೇಳಿಲ್ಲ. ನನಗೆ ಅಸಮಾಧಾನ ಇದೆ ಅಂತ ಎಲ್ಲಾದ್ರೂ ಹೇಳಿದ್ದೀನಾ..?. ರಾಜಕಾರಣಿಗಳಿಗೆ ಬದ್ಧತೆ ಇರಬೇಕು. ಕಾಂಗ್ರೆಸ್ ಗೆ ಬರ್ತಾರೆ ಅಂತ ಅವರ ಭಾವನೆಗಳಿವೆ. ಅದಕ್ಕೆ ನಾನು ಬೇಡ ಅನ್ನಲಾ..?. ಅವರಿಗೆಲ್ಲಾ ಒಳ್ಳೆಯದಾಗಲಿ ಎಂದು ಹೇಳಿದರು.