ರೈಲ್ವೆ ಹಳಿಯಲ್ಲಿ ಸಬ್ ಇನ್ಸ್ಪೆಕ್ಟರ್ ಶವ ಪತ್ತೆ

ಭೋಪಾಲ್: ಮಧ್ಯಪ್ರದೇಶ ಪೊಲೀಸರ ವಿಶೇಷ ಬ್ರಾಂಚ್ ನ ಯುವ ಸಬ್ ಇನ್ಸ್ಪೆಕ್ಟರ್ ಒಬ್ಬರು ಶುಕ್ರವಾರ-ಶನಿವಾರದ ನಡುರಾತ್ರಿಯಲ್ಲಿ ಭೋಪಾಲ್ನ ಮಿಸ್ರೋಡ್ ಪ್ರದೇಶದ ರೈಲ್ವೆ ಹಳಿಯೊಂದರಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ರೀತಿಯಲ್ಲಿ ಪತ್ತೆಯಾಗಿದ್ದಾರೆ.
ಇದಕ್ಕೂ ಕೆಲವೇ ತಾಸುಗಳ ಮೊದಲು ಮೃತ ಸಬ್‌ಇನ್ಸ್ಪೆಕ್ಟರ್ ಅವರ ಕಿರಿಯ ಪತ್ನಿ ಹಾಗೂ ಗಂಡು ಮಗುವಿನ ರಕ್ತಸಿಕ್ತ ಮೃತದೇಹಗಳು ಭೋಪಾಲ್ನ ಇನ್ನೊಂದು ಭಾಗದಲ್ಲಿರುವ ಅವರ ನಿವಾಸದಲ್ಲಿ ಪತ್ತೆಯಾಗಿವೆ. ಮನೆಗೆ ಹೊರಗಿನಿಂದ ಬೀಗಹಾಕಲಾಗಿತ್ತು ಎಂದು ಮೂಲಗಳು ತಿಳಿಸಿವೆ.
2017ನೇ ಬ್ಯಾಚ್ನ ಸಬ್‌ಇನ್ಸ್ಪೆಕ್ಟರ್ ಆಗಿದದ ಸುರೇಶ್ ಕಾನ್ಗುಡ ಮೃತ ಸಬ್ ಇನ್ಸ್ಪೆಕ್ಟರ್. ಅವರನ್ನು ಭೋಪಾಲ್ನ ಪೊಲೀಸ್ ಮುಖ್ಯ ಕಾರ್ಯಾಲಯದಲ್ಲಿರುವ ಸ್ಪೆಶಲ್ ಬ್ರಾಂಚ್ನ ತಾಂತ್ರಿಕ ವಿಭಾಗದಲ್ಲಿ ನಿಯೋಜಿಸಲಾಗಿತ್ತು. ವೇಗವಾಗಿ ಧಾವಿಸುತ್ತಿದ್ದ ರೈಲಿನಡಿಗೆ ಬಿದ್ದು ಸುರೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆಯೆಂದು ಪೊಲೀಸ್ ತನಿಖೆ ತಿಳಿಸಿದೆ. ಈ ಯುವ ಇನ್ಸ್ಪೆಕ್ಟರ್ ಮೊದಲಿಗೆ ತನ್ನ ಪತ್ನಿ ಹಾಗೂ ಮಗುವನ್ನು ಕೊಂದು, ಆನಂತರ ರೈಲಿನಡಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯಿದೆಯೆಂದು ತನಿಖಾ ವರದಿ ಹೇಳಿದೆ.