ಮೈತುಂಬಾ ಬಟ್ಟೆ ಧರಿಸಿಲ್ಲವೆಂದು ಪತ್ನಿಯ ಕೊಲೆಗೈದ ಪತಿ

ಲಕ್ನೋ: ಸಾರ್ವಜನಿಕ ಸ್ಥಳದಲ್ಲಿ ಮೈತುಂಬಾ ಬಟ್ಟೆ ಧರಿಸಿಲ್ಲ ಎಂದು ಪತ್ನಿಯನ್ನೇ ವ್ಯಕ್ತಿಯೊಬ್ಬ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಬರ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಗಾಜಿಪುರ ಗ್ರಾಮದಲ್ಲಿ ನಡೆದಿದೆ.
ಸ್ವಪ್ನಾ ಮೃತ ಮಹಿಳೆ ಹಾಗೂ ಮೋಹಿತ್ ಕುಮಾರ್ ಬಂಧಿತ ವ್ಯಕ್ತಿ. ಸ್ವಪ್ನಾ ಸಾರ್ವಜನಿಕ ಸ್ಥಳದಲ್ಲಿ ಮೈತುಂಬಾ ಬಟ್ಟೆ ಧರಿಸದೇ ಬಂದಿದ್ದಕ್ಕೆ ಮೋಹಿತ್ ಕುಮಾರ್ ಸಿಟ್ಟಾಗಿದ್ದಾನೆ. ಅಷ್ಟೇ ಅಲ್ಲದೇ ಇದೇ ವಿಚಾರವಾಗಿ ಸ್ವಪ್ನಾ ಹಾಗೂ ಮೋಹಿತ್ ಕುಮಾರ್ ಮಧ್ಯೆ ಜಗಳ ನಡೆದಿದೆ. ಪದೇ ಪದೇ ಎಚ್ಚರಿಕೆ ನೀಡಿದರೂ ಪತ್ನಿ ಕಿವಿಗೊಡುತ್ತಿಲ್ಲ ಎಂದು ಕೋಪಿಸಿಕೊಂಡಿದ್ದಾನೆ. ಇದರಿಂದಾಗಿ ಆಕ್ರೋಶಗೊಂಡ ಮೋಹಿತ್ ಕುಮಾರ್, ಸ್ವಪ್ನಾಳ ಕುತ್ತಿಗೆಯ ಮೇಲೆ ಚಾಕುವಿನಿಂದ ಸೀಳಿ ಹತ್ಯೆ ಮಾಡಿದ್ದಾನೆ.
ಘಟನೆ ಬಗ್ಗೆ ನೆರೆಹೊರೆಯವರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಸ್ವಪ್ನಾಳ ಮೃತದೇಹದ ಪಕ್ಕದಲ್ಲಿ ಮೋಹಿತ್ ಕುಮಾರ್ ಕುಳಿತಿರುವುದು ಕಂಡು ಬಂದಿರುವುದಾಗಿ ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಆರೋಪಿ ಮೋಹಿತ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ./////