ಬಿಜೆಪಿ ನಾಯಕರ ನಡೆಗೆ ಸಚಿವ ಸೋಮಣ್ಣ ಬೇಸರ

ಬೆಂಗಳೂರು: ನಾನು ಬಿಜೆಪಿಗೆ ಬರಲು ಅನಂತ ಕುಮಾರ್ ಕಾರಣ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರು ಚೆನ್ನಾಗಿರಲಿ. ಇನ್ನು ಮುಂದಾದ್ರೂ ತೇಜೋವಧೆ ಮಾಡಬೇಡಿ ಎಂದು ಸಚಿವ ವಿ. ಸೋಮಣ್ಣ ಬಿಜೆಪಿ ನಾಯಕರ ವಿರುದ್ಧವೇ ಅಸಮಾಧಾನ ತೋಡಿಕೊಂಡಿದ್ದಾರೆ.
ನಾನು ಬೆಂಗಳೂರಿಗೆ ಬಂದಿದ್ದು ಹೊಟ್ಟೆಪಾಡಿಗಾಗಿ. ಪಿಗ್ಮಿ ಕಲೆಕ್ಟ್ ಮಾಡಿದ್ದೇನೆ. ಬೆಂಗಳೂರಿಗೆ ಬಂದು 56 ವರ್ಷ ಆಯ್ತು. ನನ್ನ ಜೀವವನ್ನು ನಾನೇ ರೂಪಿಸಿಕೊಂಡಿದ್ದೇನೆ. ನಾನು ಸಂಜೆ ಕಾಲೇಜಿನಲ್ಲಿ ಓದಿಕೊಂಡು ಬೆಳೆದಿದ್ದೇನೆ. ನಾನು ಅವತ್ತು ವಠಾರದಲ್ಲಿ ಇದ್ದೆ. ಎರಡು ಸಲ ಕಾಂಗ್ರೆಸ್‌ನಲ್ಲಿ ನಿಂತು ಗೆದ್ದೆ. ಆಮೇಲೆ ಅನಂತ ಕುಮಾರ್ ನನ್ನ ಕರೆದು ಬಿಜೆಪಿಯಲ್ಲಿ ಸ್ಥಾನ ಕೊಟ್ರು. ನಾನು ಯಾವ ಜಾತಿ ಅಂತಾ ಆವತ್ತೇ ಗೊತ್ತಿರಲಿಲ್ವಾ..? ನನಗೆ ಡಬಲ್ ಸ್ಟ್ಯಾಂಡರ್ಡ್ ಗೊತ್ತಿಲ್ಲ. ನಾನು ಯಾವತ್ತಾದರೂ ಬಿಜೆಪಿ ಬಿಡ್ತೀನಿ ಅಂತ ಹೇಳಿದ್ನಾ..? ಅನಾವಶ್ಯಕವಾಗಿ ಇನ್ನೊಬ್ಬನ ತೇಜೋವಧೆ ಮಾಡೋದು ಒಳ್ಳೆಯದಲ್ಲ ಎಂದು ಸೋಮಣ್ಣ ಕಣ್ಣೀರು ಹಾಕಿದರು.
ಮಾಜಿ ಸಿಎಂ ಯಡಿಯೂರಪ್ಪ ಅವರು ನಮ್ಮ ಪ್ರಶ್ನಾತೀತ ನಾಯಕರು. ಅವರು ಆರೋಗ್ಯವಾಗಿ ಇರಲಿ. ಬಿ.ಎಲ್ ಸಂತೋಷ್ ನಮ್ಮ ನಾಯಕರು, ಪ್ರಹ್ಲಾದ್ ಜೋಶಿ ನಮ್ಮ ನಾಯಕರು. ಇನ್ಮುಂದೆ ನಾನು ಮುಖ್ಯಮಂತ್ರಿಗಳಿಗೆ ಅಗೌರವ ತರುವ ರೀತಿ ನಡೆದುಕೊಳ್ಳಲ್ಲ. ಪಕ್ಷ ಹೇಳಿದ್ರೆ ಚುನಾವಣೆಗೆ ನಿಲ್ತೀನಿ. ಇಲ್ಲ ಅಂದರೆ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ಸೋಮಣ್ಣ ಹೇಳಿದ್ದಾರೆ.
ನನ್ನ ಮಗ ಏನೋ ಆಗಬೇಕು ಅನ್ನೋ ಆಸೆ ನನಗಿಲ್ಲ. ನಮ್ಮಪ್ಪ ತಪ್ಪು ಮಾಡಿದ್ರು ತಪ್ಪೇ. ನನ್ನ ಮಗ ಏನಾದರೂ ಪಕ್ಷದ ವಿರುದ್ಧ ನಡೆದುಕೊಂಡ್ರೆ, ಅವನ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿ. ಪಕ್ಷಕ್ಕೆ ನಾನು ಆಗಲಿ, ನನ್ನ ಪುತ್ರ ನಿಂದ ಆಗಲಿ ಮುಜುಗರ ತರುವುದಿಲ್ಲ. ನಾನು ಮಂತ್ರಿ ಆಗಿದ್ದೇನೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗೋದು ಅಂತಿದೆ. ಮೋದಿ, ಅಮಿತ್ ಶಾ, ನಡ್ಡಾ ನಮ್ಮ ನಾಯಕರು. ನಾವು ಚುನಾವಣೆ ಎದುರಿಸ್ತೇವೆ ಎಂದು ಸೋಮಣ್ಣ ಹೇಳಿದರು./////