ಮಸೀದಿ ಮೇಲೆ ಕಲ್ಲುತೂರಾಟ; ಉದ್ವಿಗ್ನ ಪರಿಸ್ಥಿತಿ

ಹಾವೇರಿ: ಮಸೀದಿಯೊಂದರ ಮೇಲೆ ಹಿಂದೂ ಕಾರ್ಯಕರ್ತರು ಕಲ್ಲುತೂರಾಟ ಮಾಡಿದ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
2 ದಿನಗಳ ಹಿಂದೆ ನಡೆದಿದ್ದ ರಾಯಣ್ಣ ಪ್ರತಿಮೆ ಮೆರವಣಿಗೆಗೆ ಅಡ್ಡಿ ಮಾಡಲಾಗಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಸ್ಲಿಮರ ಮನೆ, ವಾಹನಗಳ ಮೇಲೂ ಕಲ್ಲುತೂರಾಟ ಮಾಡಲಾಗಿದೆ. ಹಿಂದೂ ಕಾರ್ಯಕರ್ತರು ಐ20 ಕಾರು, ಓಮ್ನಿ ಕಾರಿನ ಗ್ಲಾಸ್ ಒಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಟ್ಟಿಹಳ್ಳಿ ಪಟ್ಟಣದ ಕೆಲವು ಉರ್ದು ಶಾಲೆಗಳ ಮೇಲೂ ಕಲ್ಲು ತೂರಾಟ ನಡೆದಿದೆ. ಘಟನೆಯಿಂದ ಆಘಾತಕ್ಕೊಳಗಾಗಿರುವ ವಿದ್ಯಾರ್ಥಿಗಳು ಶಾಲೆಯಿಂದ ಹೊರಬಂದು ಕಣ್ಣೀರಿಡುತ್ತಿದ್ದಾರೆ. ಮುಸ್ಲಿಂ ಆಟೋ ಚಾಲಕರೊಬ್ಬರನ್ನು ಹಿಂದೂ ಕಾರ್ಯಕರ್ತರು ಥಳಿಸಿದ್ದಾರೆ. ಆಟೋದ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದೀಗ ಮುಸ್ಲಿಮರು ವಾಸಿಸುವ ಪ್ರದೇಶಗಳು ಹಾಗೂ ಮಸೀದಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಘಟನೆ ವಿವಿರ: ಹಿಂದೂ ಕಾರ್ಯಕರ್ತರ ಮೆರವಣಿಗೆ ತೆರಳುತ್ತಿದ್ದ ವೇಳೆ ಕೆಲವು ಮುಸ್ಲಿಮರು ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಘರ್ಷಣೆ ಸಂಭವಿಸಿದೆ. ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಮಸೀದಿ, ಉರ್ದು ಶಾಲೆಗಳು ಹಾಗೂ ಮುಸ್ಲಿಮರ ಮನೆಗಳ ಮೇಲೆ ಕಲ್ಲುತೂರಾಟ ಮಾಡಿದ್ದಾರೆ.
ಮಸೀದಿ ಮೇಲೆ ಕಲ್ಲುತೂರಾಟ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ ಎಂದು ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರವಾಗಿ ಪೊಲೀಸರಿಂದ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದ ಅವರು, ರಾಯಣ್ಣ ಪ್ರತಿಮೆ ಮೆರವಣಿಗೆ ವೇಳೆ ಕಲ್ಲುತೂರಾಟ ಮಾಡಿದ್ದು ತಪ್ಪು. ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ರಾಯಣ್ಣ ಒಬ್ಬ ದೇಶ ಭಕ್ತ ಸ್ವಾತಂತ್ರ್ಯ ಹೋರಾಟಗಾರ. ಅವರ ಮೆರವಣಿಗೆ ಮಾಡುವ ಸಂದರ್ಭದಲ್ಲಿ ಯಾರು ತಪ್ಪು ಮಾಡಿದರೂ ಅದು ತಪ್ಪೇ. ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ ಎಂದು ಸಚಿವರು ಪ್ರಶ್ನಿಸಿದ್ದಾರೆ.
ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಜಗಳವಾಗದ ರೀತಿ ಸೌಹಾರ್ದಯುತವಾಗಿ ಸಂಘರ್ಷವನ್ನು ಬಗೆಹರಿಸಬೇಕು ಎಂದು ಹೇಳಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ಪೊಲೀಸರು ಶಾಂತಿ ಕಾಪಾಡುವ ಕೆಲಸವನ್ನು ಮಾಡಬೇಕು. ಯಾರೇ ಆಗಲಿ ಕಾನೂನು ಉಲ್ಲಂಘಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ./////