Belagavi News In Kannada | News Belgaum

ಸರ್ಕಾರಿ ಕಟ್ಟಡ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ : ಆರೋಪ • ಶಿರಹಟ್ಟಿ ಬಿ.ಕೆ.ಗ್ರಾಮದಲ್ಲಿ ಪಂಚಾಯಿತಿ ಸದಸ್ಯರ ಆಕ್ರೋಶ

 

ಹುಕ್ಕೇರಿ : ತಾಲೂಕಿನ ಶಿರಹಟ್ಟಿ ಬಿ.ಕೆ. ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ ಸರ್ಕಾರಿ ಕಟ್ಟಡವೊಂದನ್ನು ಶಾಖಾ ಮಠವಾಗಿ ಪರಿವರ್ತಿಸಿರುವುದು ಮತ್ತು ಈ ಕಟ್ಟಡದ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘಿಸಿರುವುದು ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಗ್ರಾಮದ ಹಂಚಿನಾಳ ರಸ್ತೆ ಸಮೀಪ ಗ್ರಾಮ ವಿಕಾಸ ಯೋಜನೆಯಡಿ ಸುಮಾರು 10 ಲಕ್ಷಕ್ಕೂ ಅಧಿಕ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ. ತಮ್ಮನ್ನು ಪರಿಗಣಿಸದೇ ಈ ಸಮುದಾಯ ಭವನ ಉದ್ಘಾಟಿಸಿರುವುದಕ್ಕೆ ತೀವ್ರ ಆಕ್ರೋಶ ಮತ್ತು ವಿರೋಧ ವ್ಯಕ್ತಪಡಿಸಿರುವ ಗ್ರಾಮ ಪಂಚಾಯಿತಿ ಸದಸ್ಯರು, ಮುಂದಿನ ದಿನಗಳಲ್ಲಿ ಎಲ್ಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಆಹ್ವಾನಿಸಿ ಕಟ್ಟಡವನ್ನು ಮರಳಿ ಉದ್ಘಾಟಿಸಲು ಚಿಂತನೆ ನಡೆಸಿದ್ದಾರೆ.
ಈ ಸಮುದಾಯ ಭವನದ ಆಸ್ತಿ ಸೃಜನೆ ಮಾಡಿರುವ ಪಂಚಾಯತ್‍ರಾಜ್ ಎಂಜನೀಯರಿಂಗ್ ಉಪವಿಭಾಗವು ಗ್ರಾಪಂಗೆ ಇನ್ನೂ ಹಸ್ತಾಂತರ ಪೃಕ್ರಿಯೆಯನ್ನೇ ಪೂರ್ಣಗೊಳಿಸಿಲ್ಲ. ಆದರೆ, ತಾಲೂಕು ಮಟ್ಟದ ಅಧಿಕಾರಿಗಳು ತರಾತುರಿಯಲ್ಲಿ ಉದ್ಘಾಟಿಸಿ, ಮಠದ ಅಧೀನಕ್ಕೆ ನೀಡಿದ್ದು ಯಾವ ಪುರುಷಾರ್ಥಕ್ಕೆ ಎಂದು ಸದಸ್ಯರು ಪ್ರಶ್ನಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಈ ಸಮುದಾಯ ಭವನವನ್ನು ಹಿರೇಮಠದ ಗುರುಶಾಂತೇಶ್ವರ ಸಂಸ್ಥಾನದ ಶಾಖಾ ಮಠವಾಗಿ ಪರಿವರ್ತಿಸಿದ್ದನ್ನು ಪಂಚಾಯಿತಿ ಸದಸ್ಯರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದೀಗ ಈ ಸರ್ಕಾರಿ ಕಟ್ಟಡ ಒಂದೇ ಸಮುದಾಯಕ್ಕೆ ಸೀಮಿತಗೊಂಡಿರುವುದಕ್ಕೆ ಇತರೆ ಸಮಾಜದವರನ್ನು ಕೆರಳುವಂತೆ ಮಾಡಿದೆ.
ಜನರು ನೀಡಿದ ತೆರಿಗೆಯ ಹಣದಲ್ಲಿ ನಿರ್ಮಿಸಿರುವ ಈ ಕಟ್ಟಡವನ್ನು ಏಕಪಕ್ಷೀಯವಾಗಿ ಚಾಲನೆ ನೀಡಿದ್ದು ನಾಚಿಕೆಯ ವಿಷಯವಾಗಿದೆ. ಅಲ್ಲದೇ ಸದಸ್ಯರನ್ನು ಆಹ್ವಾನಿಸದೇ ಇರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಲ್ಲಪ್ಪ ಡಪ್ಪರಿ ತಿಳಿಸಿದ್ದಾರೆ.
ಸಮುದಾಯ ಭವನ ಉದ್ಘಾಟನೆ ಇದೊಂದು ಪೂರ್ವನಿಯೋಜಿತ ಕೃತವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಸಚಿವರಿಗೆ ದೂರು ಸಲ್ಲಿಸಲಾಗುವುದು. ಶಿಷ್ಟಾಚಾರ ಉಲ್ಲಂಘಿಸಿದ್ದು ಘಟನೆಗೆ ಕಾರಣವಾದವರು ಕಾನೂನು ಸಮರ ಎದುರಿಸಬೇಕಾಗುತ್ತದೆ ಎಂದು ಯುವ ಮುಖಂಡ ಮಂಜುನಾಥ ಪಡದಾರ ಎಚ್ಚರಿಕೆ ನೀಡಿದ್ದಾರೆ.