Belagavi News In Kannada | News Belgaum

ಯುವಕನ ಹೊಟ್ಟೆಯಿಂದ 56 ಬ್ಲೇಡ್‍ಗಳನ್ನು ಹೊರತೆಗೆದ ವೈದ್ಯರು!

ಜೈಪುರ: 26 ವರ್ಷದ ಯುವಕನೊಬ್ಬ ಬರೋಬ್ಬರಿ 56 ಬ್ಲೇಡ್‍ಗಳನ್ನು ನುಂಗಿರುವ ಅಚ್ಚರಿ ಹಾಗೂ ಆಘಾತಕಾರಿ ಘಟನೆಯೊಂದು ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.
ಯುವಕನನ್ನು ಯಶಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ರಾಜಸ್ಥಾನದ ಸಂಚೋರ್ ಪಟ್ಟಣದ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ನಿರ್ವಹಿಸುತ್ತಿದ್ದ ಯಶಪಾಲ್ ಸಿಂಗ್, ತನ್ನ ನಾಲ್ವರು ಸ್ನೇಹಿತರೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದನು. ಇತ್ತೀಚೆಗೆ ಯಶಪಾಲ್ ವಿಪರೀತವಾಗಿ ರಕ್ತವಾಂತಿ ಮಾಡುತ್ತಿದ್ದ ಪರಿಣಾಮ ಕೂಡಲೇ ಗೆಳೆಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಆತನನ್ನು ವೈದ್ಯರು ಪರೀಕ್ಷೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಖಾಸಗಿ ಆಸ್ಪತ್ರೆಯ ವೈದ್ಯ ಡಾ.ನರಸಿ ರಾಮ್ ದೇವಸಿ ನಡೆಸಿದ ಸ್ಕ್ಯಾನಿಂಗ್ ರಿಪೋರ್ಟ್‍ನಲ್ಲಿ ಆತನ ಹೊಟ್ಟೆಯೊಳಗೆ ಲೋಹದ ಅಂಶ ಪತ್ತೆಯಾಗಿದೆ. ಸಮಸ್ಯೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು, ವೈದ್ಯರು ಸೋನೋಗ್ರಫಿ ಮತ್ತು ಎಂಡೋಸ್ಕೋಪಿ ಪರೀಕ್ಷೆ ನಡೆಸಿದ್ದಾರೆ. ವ್ಯಕ್ತಿಯ ಹೊಟ್ಟೆಯಲ್ಲಿ ಲೋಹದ ಬ್ಲೇಡ್‍ಗಳಿವೆ ಎಂದು ಪರೀಕ್ಷೆಗಳಲ್ಲಿ ಸ್ಪಷ್ಟವಾಗಿ ತಿಳಿದುಬಂದಿದೆ. ತಕ್ಷಣ ಆಪರೇಷನ್ ನಡೆಸಿ ಹೊಟ್ಟೆಯಿಂದ 56 ಬ್ಲೇಡ್‍ಗಳನ್ನು ಹೊರತೆಗೆಯಲಾಗಿದೆ.
ಈತ ಪೇಪರ್ ಕವರ್ ಗಳ ಸಮೇತ ಬ್ಲೇಡ್ ನುಂಗಿದ್ದು, ಪ್ರಾರಂಭದಲ್ಲಿ ಆತನಿಗೆ ಗೊತ್ತಾಗಲ್ಲಿಲ್ಲ. ಹೊಟ್ಟೆಯೊಳಗೆ ಪೇಪರ್ ಕರಗಿದಂತೆ, ಅದು ಹಾನಿಯನ್ನುಂಟುಮಾಡಲು ಪ್ರಾರಂಭಿಸಿದೆ. ನಂತರ ನೋವು, ವಾಂತಿ ಪ್ರಾರಂಭವಾಗಿದೆ. ಬ್ಲೇಡ್‍ಗಳನ್ನು ಇಬ್ಭಾಗ ಮಾಡಿ ತಿಂದಿದ್ದಾನೆ. ಸದ್ಯ ಆತನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ.