Belagavi News In Kannada | News Belgaum

ಅದಾನಿ ಪ್ರಕರಣ: ಗಾಂಧೀಜಿ ಪ್ರತಿಮೆ ಎದುರು ಕಾಂಗ್ರೆಸ್ ನಾಯಕರು ಪ್ರತಿಭಟನೆ

ದೆಹಲಿ: ಸೋನಿಯಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಸಂಸದರು ಅದಾನಿ ವಿವಾದಕ್ಕೆ ಸಂಬಂಧಿಸಿದಂತೆ ಸಂಸತ್ ಭವನದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಇಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ಅದಾನಿ ಸಮೂಹದ ಮೇಲಿನ ವಂಚನೆ ಆರೋಪಗಳ ತನಿಖೆ ನಡೆಸುವಂತೆ ಒತ್ತಾಯಿಸಿ ಸೋನಿಯಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಸಂಸದರು ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಆದಾನಿ ಸಮೂಹವು ಕೃತಕವಾಗಿ ಷೇರುಗಳ ಬೆಲೆ ಏರಿಳಿತ ಮಾಡುವ ಮೂಲಕ ಖರೀದಿದಾರರನ್ನು ವಂಚಿಸಿತ್ತು ಎಂಬ ಕುರಿತು ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆಬ್‌ಬರ್ಗ್ ರಿಸರ್ಚ್ ವರದಿಯ ಬಳಿಕ ಕಂಪನಿಯ ಷೇರು ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿದಿತ್ತು. ಈ ಕುರಿತಂತೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿದೆ.

ಅದಾನಿ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸುವಂತೆ ಒತ್ತಾಯಿಸಿ 18 ವಿರೋಧ ಪಕ್ಷಗಳ ನಾಯಕರು ಸಂಸತ್ತಿನಿಂದ ಗುರುವಾರ ಮಧ್ಯಾಹ್ನ ಮೆರವಣಿಗೆ ನಡೆಸಿತು. ಮೆರವಣಿಗೆ ಆರಂಭವಾಗುತ್ತಿದ್ದಂತೆಯೇ ದೆಹಲಿ ಪೊಲೀಸರು ನಾಯಕರನ್ನು ತಡೆದರು.

ಅದಾನಿ ಪ್ರಕರಣ ಜೆಪಿಸಿ ತನಿಖೆಗೆ ನೀಡಲು ಒತ್ತಾಯ: ಪ್ರತಿಭಟನಾನಿರತ ನಾಯಕರು ಇ.ಡಿ ಕಚೇರಿ ಕಡೆಗೆ ಮೆರವಣಿಗೆ ಸಾಗುವುದನ್ನು ತಡೆಯಲು ದೆಹಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು, ಭಾರಿ ಪ್ರಮಾಣದಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಅಲ್ಲದೆ, ಸ್ಥಳದಲ್ಲಿ ಸೆಕ್ಷನ್ 144ನ್ನೂ ಜಾರಿಗೊಳಿಸಿದ್ದರು. ಹೀಗಾಗಿ ನಾಯಕರು ಪ್ರತಿಭಟನಾ ಮೆರವಣಿಗೆ ನಡೆಸಲು ಸಾಧ್ಯವಾಗಲಿಲ್ಲ.

ಪ್ರತಿಭಟನೆಗೆ ಪೊಲೀಸರಿಂದ ತಡೆ: ವಿಪಕ್ಷ ಸದಸ್ಯರಿಗೆ ಮುಂದೆ ಸಾಗಲು ಸಾಧ್ಯವಾಗದೆ ಇದ್ದಾಗ, ಮೆರವಣಿಗೆಯನ್ನು ರದ್ದುಗೊಳಿಸಿ ಸಂಸತ್‌ಗೆ ವಾಪಸಾದರು. ತಾವು ಇ.ಡಿಯಿಂದ ಅಪಾಯಿಂಟ್‌ಮೆಂಟ್ ಕೇಳಿದ್ದು, ಶೀಘ್ರವೇ ಜಂಟಿ ದೂರು ಪತ್ರ ಬಿಡುಗಡೆ ಮಾಡುವುದಾಗಿ ಹೇಳಿದರು.

ನಮ್ಮನ್ನು ಇಲ್ಲಿಯೇ ತಡೆದಿದ್ದಾರೆ. ನಾವು 200 ಜನರಿದ್ದರೆ, ಅಲ್ಲಿ ಕನಿಷ್ಠ 2,000 ಪೊಲೀಸ್ ಸಿಬ್ಬಂದಿ ಇದ್ದಾರೆ. ಅವರು ನಮ್ಮ ಧ್ವನಿಯನ್ನು ಹತ್ತಿಕ್ಕಲು ಬಯಸಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ” ಎಂದು ಪೊಲೀಸರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಿಡಿಕಾರಿದರು. ”ಈ ವಿಚಾರವನ್ನು ಯಾರಾದರೂ ಚರ್ಚೆಯೊಂದರಲ್ಲಿ ಪ್ರಸ್ತಾಪಿಸಿದರೆ, ಅವರನ್ನು ದೇಶದ್ರೋಹಿಗಳು ಎಂದು ಕರೆಯಲಾಗುತ್ತದೆ” ಎಂದು ಹರಿಹಾಯ್ದರು.

ರಾಜ್ಯಸಭೆಯ ಕಾಂಗ್ರೆಸ್ ಉಪನಾಯಕ ಪ್ರಮೋದ್ ತಿವಾರಿ ಮಾತನಾಡಿ, ವಿರೋಧ ಪಕ್ಷಗಳ 200 ಸಂಸದರು ಅದಾನಿ ವಿಚಾರ ಸಂಬಂಧ ಮನವಿ ಪತ್ರ ಸಲ್ಲಿಸಲು ಇಡಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದೆವು. ಆದರೆ, ಪೊಲೀಸರು ನಮ್ಮನ್ನು ಬಲವಂತವಾಗಿ ತಡೆಹಿಡಿದರು. ಇದೀಗ ನಾವು ಮತ್ತೆ ಸಂಸತ್ತಿಗೆ ಹೋಗುತ್ತಿದ್ದೇವೆ. ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಮಾತನಾಡಿ, ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ. ನಮ್ಮ ಪ್ರತಿಭಟನಾ ಮೆರವಣಿಗೆಯನ್ನು ಮುಂದುವರೆಸುತ್ತೇವೆಂದು ತಿಳಿಸಿದ್ದಾರೆ. ಹೀಗಾಗಿ ಇಂದೂ ಕೂಡ ಪ್ರತಿಭಟನೆಯನ್ನು ಕಾಂಗ್ರೆಸ್ ನಾಯಕರು ನಡೆಸುತ್ತಿದ್ದಾರೆ. ಜಂಟಿ ಸಂಸದೀಯ ಸಮಿತಿ ತನಿಖೆಗೆ ಅದಾನಿ ಪ್ರಕರಣ ನೀಡುವವರೆಗೂ ಪ್ರತಿಭಟನೆ ಮೂಂದುವರೆಸುವುದಾಗಿ ಹೇಳಿದ್ದಾರೆ./////