Belagavi News In Kannada | News Belgaum

ತಂದೆಗಾಗಿ ವರುಣ ಕ್ಷೇತ್ರ ಬಿಡಲು ಸಿದ್ದ: ಶಾಸಕ ಯತೀಂದ್ರ

ಮೈಸೂರು:    ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದು ಬೇಡ ಎಂದು ಕಾಂಗ್ರೆಸ್​ ಹೈಕಮಾಂಡ್​ ಹೇಳಿರುವುದಾಗಿ ವರದಿಯಾಗಿದೆ. ಈ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಮಗ ಶಾಸಕ ಯತೀಂದ್ರ ಅವರು, ನನ್ನ ತಂದೆ ಎಲ್ಲೇ ನಿಂತರೂ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.

 

ಈ ಕುರಿತು ಮಾತಾಡಿದ ಶಾಸಕ ಯತೀಂದ್ರ ಸಿದ್ದರಾಮಯ್ಯ, ಈ ಬಗ್ಗೆ ಹೈಕಮಾಂಡ್ ಏನು ಹೇಳಿದೆ ಎಂದು ನನಗೆ ಗೊತ್ತಿಲ್ಲ. ಇದರ ಬಗ್ಗೆ ತಂದೆಯವರೇ ಸ್ಪಷ್ಟನೆ ನೀಡಬೇಕು. ನಮ್ಮ ತಂದೆ ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತಾರೆ. ಕೋಲಾರ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಗೆದ್ದೆ ಗೆಲ್ಲುತ್ತಾರೆ. ವರುಣ, ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಅದೇ ಆಗುತ್ತದೆ ಎಂದು ಭವಿಷ್ಯ ನುಡಿದರು.

ಸಿದ್ದರಾಮಯ್ಯ ವಿರುದ್ಧ ವಿರೋಧಿಗಳು ಒಂದಾಗುತ್ತಾರೆ. ತಂದೆ ಬೆಂಗಳೂರಿಗೆ ಬಂದ ತಕ್ಷಣ ಮಾತನಾಡುತ್ತೇನೆ. ವರುಣ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬಂದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.