ಸರಣಿ ಅಪಘಾತ ಸಣ್ಣ ಮಳೆಗೆ ಕೆರೆಯಂತಾದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ;

ರಾಮನಗರ: ಕಳೆದ ವಾರ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದ್ದ ಬೆಂಗಳೂರು-ಮೈಸೂರಿನ ದಶಪಥ ಹೆದ್ದಾರಿ ಸಣ್ಣ ಮಳೆಗೆ ಕೆರೆಯಂತಾಗಿದೆ. ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನಗಳು ಕೆಟ್ಟು ನಿಂತಿದ್ದು ಹಿಂದೆಯಿಂದ ಬಂದ ವಾಹನಗಳು ಡಿಕ್ಕಿಯಾಗಿ ಸರಣಿ ಅಪಘಾತ ಸಂಭಸಿವೆ.
ರಾಮನಗರ ಸಮೀಪದ ಸಂಘ ಬಸವನದೊಡ್ಡಿ ಬಳಿ ಹೆದ್ದಾರಿಯು ಮಳೆಗೆ ಸಂಪೂರ್ಣ ಜಲಾವೃತವಾಗಿದೆ. ಇದರಿಂದ ಮಳೆ ನೀರಿನಲ್ಲಿ ಕೆಟ್ಟುನಿಂತ ಕಾರಿಗೆ ಹಿಂಬದಿಯಿಂದ ಲಾರಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು ಸದ್ಯ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರಕ್ಕೆ ಕರೆ ಮಾಡಿದರು ಅಧಿಕಾರಿಗಳು ನೆರವಿಗೆ ಬಂದಿಲ್ಲ. ಹೀಗಾಗಿ ಸವಾರರು ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರಿನಲ್ಲೇ ಕೆಲ ವಾಹನಗಳು ಕೆಟ್ಟು ನಿಂತು ಸವಾರರು ಪರದಾಡುವಂತಾಗಿದೆ. ಅಲ್ಲದೇ ಹಿಂದೆ ಬಂದು ವಾಹನಗಳು ಡಿಕ್ಕಿಯಾಗಿದ್ದರಿಂದ ಸರಣಿ ಅಪಘಾತ ಸಂಭವಿಸಿದೆ. ಹೆದ್ದಾರಿ ನಿರ್ಮಾಣವು ತರಾತುರಿಯಲ್ಲಿ ನಿರ್ಮಿಸಲಾಗಿದ್ದು ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡದಿರೋದಕ್ಕೆ ಅವಾಂತರ ಸೃಷ್ಟಿಯಾಗಿದೆ. ದುಬಾರಿ ಟೋಲ್ ಕಟ್ಟಿದರೂ ಸರಿಯಾದ ವ್ಯವಸ್ಥೆ ಇಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಗರಂ ಆಗಿದ್ದಾರೆ.