ಶಾಸಕ ಅನಿಲ್ ಬೆನಕೆಗೆ ಹಿಗ್ಗಾಮುಗ್ಗಾ ಜಾಡಿಸಿದ ಮತದಾರರು

ಬೆಳಗಾವಿ: ಚುನಾವಣೆ ಸಮೀಪವಿರುವಾಗ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆಗೆ ಕ್ಷೇತ್ರದ ಜನ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಾಳಮಾರುತಿಯ 11ನೇ ವಾರ್ಡ್‍ನ ವಿವಿಧ ಕಾಮಗಾರಿಗಳ ಭೂಮಿ ಪೂಜೆಗೆ ಶಾಸಕರು ಹಾಗೂ ಬೆಂಬಲಿಗರು ಆಗಮಿಸಿದ್ದರು. ಈ ವೇಳೆ ಜನ, ಕ್ಷೇತ್ರದಲ್ಲಿ ಕೆಲವು ಕಡೆ ಬೀದಿ ದೀಪ ಇಲ್ಲ. ಚರಂಡಿ ವ್ಯವಸ್ಥೆ ಇಲ್ಲ. ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಚುನಾವಣೆ ಸಮಯದಲ್ಲಿ ಜನರ ನೆನಪು ಬಂತಾ? ಲೈಟ್ ಎಲ್ಲಿದೆ ತೋರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಬೆನಕೆ ಸಹ ಏರು ಧ್ವನಿಯಲ್ಲಿ ಪ್ರತಿಕ್ರಿಯಿಸಿದ್ದು, ದೊಡ್ಡದಾಗಿ ಮಾತನಾಡಬೇಡಿ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಸ್ಥಳೀಯರು, ಈ ರೀತಿಯಲ್ಲಿ ಮಾತನಾಡುವ ಶಾಸಕರನ್ನು ನೋಡಿಲ್ಲ ಎಂದು ಸಿಟ್ಟಾಗಿದ್ದಾರೆ. ಮಹಿಳೆಯೊಬ್ಬರು, ಸರಿಯಾಗಿ ಮಾತನಾಡಿ, ನಾನು ಯಾರು ಎಂಬುದನ್ನು ತೋರಿಸುತ್ತೇನೆ. ನಾನು ನಿಮ್ಮ ಮನೆಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.