Belagavi News In Kannada | News Belgaum

ಬಿಜೆಪಿ ಅಂದರೆ ಭ್ರಷ್ಟ ಜನತಾ ಪಾರ್ಟಿ-ರಾಶಿಂಗೆ

 

ಹುಕ್ಕೇರಿ : ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಇಲ್ಲಿಯವರೆಗೂ ಬ್ಯುಸಿನೆಸ್ (ವ್ಯವಹಾರ) ಜನತಾ ಪಕ್ಷವಾಗಿತ್ತು. ಈಗ ಭ್ರಷ್ಟ ಜನತಾ ಪಕ್ಷ ಎಂಬುದೂ ಸಾಬೀತಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ ವಾಗ್ದಾಳಿ ನಡೆಸಿದರು.
ತಾಲೂಕಿನ ಅವರಗೋಳ, ಶಿರಗಾಂವ, ಸುಲ್ತಾನಪುರ, ಹಂಜ್ಯಾನಟ್ಟಿ, ಅಮ್ಮಣಗಿ ಗ್ರಾಮಗಳಲ್ಲಿ ರವಿವಾರ ಮನೆ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸಿ ಮಾತನಾಡಿದ ಅವರು, ಚುನಾವಣೆಗೆ ಖರ್ಚು ಮಾಡಲು ಬಿಜೆಪಿ ಜನರ ಹಣ ಲೂಟಿ ಮಾಡುತ್ತಿದೆ. ಬಿಜೆಪಿ ಶಾಸಕರು ಮತ್ತು ಮುಖಂಡರು ಶೇ.40 ರಷ್ಟು ಕಮಿಷನ್ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರಿಗೆ ನೈತಿಕತೆ ಇದ್ದರೆ ಲಂಚ ಪಡೆದು ಸಿಕ್ಕಿಬಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಾ ಖಾವುಂಗ, ಖಾನೇದೂಂಗ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಚನ್ನಗಿರಿ ಶಾಸಕ ಮಾಡಾಳ್ ವೀರುಪಾಕ್ಷಪ್ಪ ಪುತ್ರ ಕಂತೆ ಕಂತೆ ಲಂಚದ ಹಣದೊಂದಿಗೆ ಸಿಕ್ಕಿ ಬೀಳುತ್ತಾರೆ. ಇದು ಬಿಜೆಪಿಯ ಮಾತಿಗೂ ಕೃತಿಗೂ ಸಂಬಂಧವಿಲ್ಲ ಎಂಬುದನ್ನು ಎತ್ತಿ ತೋರುತ್ತದೆ ಎಂದು ಅವರು ಹರಿಹಾಯ್ದರು.
ವಿಶೇಷವಾಗಿ ಕಾಂಗ್ರೆಸ್ ಘೋಷಣೆಗಳಾದ ಗೃಹ ಲಕ್ಷ್ಮೀ, 200 ಯುನಿಟ್ ವಿದ್ಯುತ್ ಉಚಿತ ಹಾಗೂ 10 ಕೆಜಿ ಪಡಿತರ ಅಕ್ಕಿ ಉಚಿತ ನೀಡುವ ಭರವಸೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ಅನೇಕ ಜನಪರ ಯೋಜನೆಗಳು ಜಾರಿಯಾಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿದ್ದು ಎಲ್ಲ ರಂಗದಲ್ಲೂ ವಿಫಲವಾಗಿವೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸಾಮಾನ್ಯ ಜನರ ಜೀವನ ಕಷ್ಟಕರವಾಗಿದೆ. ಬಿಜೆಪಿ ಚುನಾವಣೆಯಲ್ಲಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು, ಹಣ, ಹೆಂಡ ಮತ್ತು ಉಡುಗೊರೆಯಂತ ವಸ್ತುಗಳನ್ನು ಹಂಚಿ ಮತ್ತೇ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದೆ ಎಂದು ಅವರು ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ, ಮುಖಂಡರಾದ ವಿನಯ ಪಾಟೀಲ, ಬಸವರಾಜ ಪಾಟೀಲ, ರೇಖಾ ಚಿಕ್ಕೋಡಿ, ಬಸವರಾಜ ದೇವುಗೋಳ, ಆನಂದ ಖಾತೇದಾರ ಮತ್ತಿತರರು ಉಪಸ್ಥಿತರಿದ್ದರು.