Belagavi News In Kannada | News Belgaum

ಭಾರತ್ ಜೋಡೋ ಪಾದಯಾತ್ರೆ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಭೇಟಿ- ಕೈ ಕಾರ್ಯಕರ್ತರಿಗೆ ಶಕ್ತಿ ತುಂಬಲಿದ್ದಾರೆ ಕಾಂಗ್ರೆಸ್ ನಾಯಕ

ಬೆಳಗಾವಿ:  ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಕಾರ್ಯಕ್ರಮ ಪಾದಯಾತ್ರೆ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ  ಆಗಮಿಸುತ್ತಿದ್ದು, ರಾಹುಲ್‌ ಸ್ವಾಗತಕ್ಕೆ ಕೈ ಪಕ್ಷ ಸಕಲ ಸಿದ್ಧತೆ ಮಾಡಿಕೊಂಡಿದೆ.
ಹೌದು…  ಮಾ.20ರಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ  ನಗರಕ್ಕೆ ಆಗಮಿಸಲಿದ್ದು, ಅಂದು ಬೆಳಗ್ಗೆ 11 ಗಂಟೆಗೆ ಸಿಪಿಎಡ್‌ ಮೈದಾನದಲ್ಲಿ ನಡೆಯುವ ಯುವಕ್ರಾಂತಿ ಹೆಸರಿನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.  ಕಾಂಗ್ರೆಸ್ ಪಾದಯಾತ್ರೆಯ ಉದ್ದೇಶ, ಅವರ ಅನುಭವ, ವಿಚಾರಧಾರೆಗಳನ್ನು ಜನರ ಜತೆ ಹಂಚಿಕೊಳ್ಳಲಿದ್ದಾರೆ.  ಮುಖ್ಯವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ನೀಡಲೆಂದು ಕಾಂಗ್ರೆಸ್‌ ನಾಯಕ ಕುಂದಾನಗರಿಗೆ  ಆಗಮಿಸಲಿದ್ದಾರೆ.


ರಾಹುಲ್‌  ಆಗಮನಕ್ಕೆ ಭರ್ಜರಿ ಸಿದ್ಧತೆ:  ಬೆಳಗಾವಿಯಲ್ಲಿ ಕಾಂಗ್ರೆಸ್‌ ನಾಯಕನ ಆಗಮನ ಹಿನ್ನೆಲೆಯಲ್ಲಿ ಕೈ ನಾಯಕರು ಭರ್ಜರಿ ಸಿದ್ಧತೆ ನಡೆಸಿದ್ದಾರೆ.  ಅಲ್ಲದೇ ಸಾಂಬ್ರಾ ಮಾರ್ಗದಿಂದ ಸಿಪಿಎಡ್ ಮೈದಾನದವರೆಗೆ  ರಸ್ತೆಯ ಎರಡು ಬದಿಗಳಲ್ಲಿ ಕಾಂಗ್ರೆಸ್‌ ಪಕ್ಷದ ಧ್ವಜವನ್ನು ಕಾರ್ಯಕರ್ತರು ಕಟ್ಟುತ್ತಿದ್ದಾರೆ. ನಗರದ ಸಿಪಿಎಡ್‌ ಮೈದಾನದಲ್ಲಿ ಯುವಕ್ರಾಂತಿ ಹೆಸರಿನ ಸಮಾವೇಶ ನಡೆಸಲು ದೊಡ್ಡ ಪ್ರಮಾಣದಲ್ಲಿ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಂಡ ಜಾಗದಿಂದಲೇ ನನ್ನ ಪಾದಯಾತ್ರೆಯ ಪ್ರಥಮ ಸಭೆ ನಡೆಸಬೇಕು ಎಂಬ ಕಾರಣಕ್ಕೆ ರಾಹುಲ್‌ ಗಾಂಧಿಯವರು ಬೆಳಗಾವಿಯನ್ನು ಆಯ್ಕೆ ಮಾಡಿಕೊಂಡಿಕೊಂಡು ಕುಂದಾನಗರಿಗೆ ಆಗಮಿಸುತ್ತಿದ್ದಾರೆ.


ಏಳು ಜಿಲ್ಲೆಯ ಕೈ ನಾಯಕರು ಭಾಗಿ: ಕಾಂಗ್ರೆಸ್‌ ಹಮ್ಮಿಕೊಂಡ ಯುವಕ್ರಾಂತಿ ಹೆಸರಿನ ಸಮಾವೇಶದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಾಳೆ  ನಗರಕ್ಕೆ ಆಗಮಿಸಲಿದ್ದು, ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ‘ಬೆಳಗಾವಿ, ಚಿಕ್ಕೋಡಿ, ಧಾರವಾಡ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಮುಖಂಡರು, 2018ರ ವಿಧಾನಸಭೆ ಚುನಾವಣೆ ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.ರಾಜ್ಯದ ದೊಡ್ಡ ಜಿಲ್ಲೆ ಎನ್ನಲಾಗುವ ಬೆಳಗಾವಿ ವ್ಯಾಪ್ತಿಯೊಂದರಲ್ಲೇ 18 ವಿಧಾನಸಭಾ ಕ್ಷೇತ್ರಗಳಿವೆ. ಹೀಗಾಗಿ ಕಾರ್ಯಕ್ರಮಕ್ಕೆ ಐದು ಲಕ್ಷ ಹೆಚ್ಚು ಜನ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದು ಚುನಾವಣೆ ಸಂಬಂಧ ಕೈ ಪಕ್ಷ ಮಾಡುತ್ತಿರುವ ಪೂರ್ವ ಸಿದ್ಧತೆ ಅಂತಲೂ ವಿಶ್ಲೇಷಿಸಲಾಗುತ್ತಿದೆ.


ಬೆಳಗಾವಿಯಿಂದಲೇ ಚುನಾವಣೆಗೆ ರಣ ಕಹಳೆ:  ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ  ಭಾರತ್ ಜೋಡೋ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಅವರು ಬೆಳಗಾವಿಯಿಂದಲೇ ಚುನಾವಣೆಗೆ ರಣ ಕಹಳೆ ಊದಲಿದ್ದಾರೆ.  ಸದ್ಯ ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದ್ದು,  ಕಾಂಗ್ರೆಸ್ ಪಕ್ಷದ ಪರಮೋಚ್ಚ ನಾಯಕ ರಾಹುಲ್ ಗಾಂಧಿ ಅವರು ಬೆಳಗಾವಿಗೆ ಭೇಟಿ ನೀಡುತ್ತಿರುವುದು ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.  ಕಾಂಗ್ರೆಸ್ ಪಕ್ಷದ ಪಾಲಿಗೆ ಕರ್ನಾಟಕ ಮೊದಲಿನಿಂದಲೂ ಬಹುದೊಡ್ಡ ಆಶಾಕಿರಣ. ಹೀಗಾಗಿ ಗತವೈಭವ ಮತ್ತೆ ಸಾಬೀತುಪಡಿಸುವ ನಿಟ್ಟಿನಲ್ಲಿ ಇದೀಗ ರಾಹುಲ್ ಗಾಂಧಿ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಅವರ ಭೇಟಿಯಿಂದ ಕರ್ನಾಟಕದ ಪಾರಂಪರಿಕ ಮತಗಳು ಗಣನೀಯವಾಗಿ ಕಾಂಗ್ರೆಸ್ ಪಕ್ಷದ ಬುಟ್ಟಿಗೆ ಸೇರಲಿವೆ. ಅದರಲ್ಲೂ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿರುವ ಮತದಾರರು ಮತ್ತೆ ತಮ್ಮ ನಿಷ್ಠೆಯನ್ನು ಕಾಂಗ್ರೆಸ್ ಪರ ನಿರೂಪಿಸುವ ಸಾಧ್ಯತೆ ಇದೆ. ಹೀಗಾಗಿ ರಾಹುಲ್ ಗಾಂಧಿ ಬೆಳಗಾವಿ ಗಡಿ ಜಿಲ್ಲೆಯಲ್ಲಿ ಮತದಾರರ ಪಾಲಿಗೆ ಭಾರಿ ಸಂಚಲನವನ್ನೇ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


ಈ ಯುವಕ್ರಾಂತಿ ಸಮಾವೇಶದಲ್ಲಿಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ,  ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್‌ ಜಾರಕಿಹೊಳಿ, ಸಲೀಂ ಅಹ್ಮದ್‌ ಖಾನ್‌,  ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ, ಕಾಂಗ್ರೆಸ್ ನಾಯಕ ಕೆ.ಎಚ್.ಮುನಿಯಪ್ಪ, ರಾಷ್ಟ್ರೀಯ ಯುತ್‌ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌, ರಾಜ್ಯ ಯುತ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮದ್‌ ನಲಪಾಡ್‌,  ವಿಧಾನ ಪರಿಷತ್‌ ಸದಸ್ಯರಾದ ನಾರಾಯಣ ಸ್ವಾಮಿ, ಮಾಜಿ ಸಚಿವ ವಿನಯ ಕುಲಕರ್ಣಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಕೆಪಿಸಿಸಿ‌‌ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಸೇರಿದಂತೆ ‌ಆರು ಜಿಲ್ಲೆಯ ಕೈ ನಾಯಕರು ಹಾಗೂ ಲಕ್ಷಾಂತರ ಕೈ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.