Belagavi News In Kannada | News Belgaum

ಚುನಾವಣೆ ವೇಳೆ ನನ್ನ ವಿರುದ್ಧ ಮಂಡ್ಯದಲ್ಲಿ ಷಡ್ಯಂತ್ರ ನಡೆದಿದೆ: ನಿಖಿಲ್

ಹಾಸನ:   ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಮಂಡ್ಯದಲ್ಲಿ ಷಡ್ಯಂತ್ರ ಮಾಡಿದಂತೆ ಈಗ ರಾಮನಗರದಲ್ಲೂ ಕುತಂತ್ರ ನಡೆಯುತ್ತಿದೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಚನ್ನಪಟ್ಟಣದ ಗ್ರಾಮವೊಂದರಲ್ಲಿ ಮಾತನಾಡಿರುವ ಅವರು, “ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದರು. ಇದೀಗ ರಾಮನಗರದಲ್ಲೂ ನನ್ನನ್ನು ಸೋಲಿಸಲು ಕುತಂತ್ರ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ಸೇರಿ ನನ್ನ ವಿರುದ್ಧ ಸಾಕಷ್ಟು ಷಡ್ಯಂತ್ರ ನಡೆಸುತ್ತಿದ್ದಾರೆ. ಅವರೆಲ್ಲ ಸೇರಿ ಏನೇ ಷಡ್ಯಂತ್ರ ನಡೆಸಿದರೂ ಪ್ರಯೋಜನವಾಗುವುದಿಲ್ಲ. ಜನರ ಆಶೀರ್ವಾದ ನನ್ನ ಮೇಲಿದೆ” ಎಂದು ಕಿಡಿಕಾರಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿರುವ ನಿಖಿಲ್ ಕುಮಾರಸ್ವಾಮಿ, “ಅವರ ಮುಖದಲ್ಲಿ ಸೋಲಿನ ಭೀತಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಶಾಸಕರಾಗಿದ್ದ ವೇಳೆ ಕ್ಷೇತ್ರದ ಅಭಿವೃದ್ಧಿ ಮಾಡಿದ್ದರೆ ಇಂದು ಭಯಪಡುವ ಅಗತ್ಯವೇ ಇರುತ್ತಿರಲಿಲ್ಲ” ಎಂದಿದ್ದಾರೆ.

ಚನ್ನಪಟ್ಟಣದ ಗ್ರಾಮವೊಂದರಲ್ಲಿ ಮಾತನಾಡಿರುವ ಅವರು, “ಯೋಗೇಶ್ವರ್ ಅವರು 20 ವರ್ಷಗಳ ಕಾಲ ಶಾಸಕರಾಗಿ ಕೆಲಸ ಮಾಡಿದ್ದಾರೆ. ಆದರೂ ಚುನಾವಣಾ ಸೋಲಿನ ಭೀತಿ ಅವರನ್ನು ಕಾಡುತ್ತಿದೆ. ಇಷ್ಟು ದಿನಗಳ ಕಾಲ ನಾಪತ್ತೆಯಾಗಿದ್ದ ಅವರಿಗೆ ಚುನಾವಣೆ ಸಮೀಪಿಸಿರುವ ಹಿನ್ನೆಲೆ ದಿಢೀರನೆ ಕ್ಷೇತ್ರ ನೆನಪಾಗಿದೆ. ಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.

“ಇಂದು ನಾನು ನಿಮ್ಮ ಮನೆಯ ಮಗ ಎಂದುಕೊಂಡು ಪ್ರಚಾರ ಪಡೆಯುತ್ತಿರುವವರು ಕೋವಿಡ್ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಕುಮಾರಸ್ವಾಮಿ ಅವರು ಮುಂದೆ ನಿಂತು ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ಯೋಗೇಶ್ವರ್ ಅವರು ಕುಮಾರಸ್ವಾಮಿ ಅವರ ಸರ್ಕಾರವನ್ನು ಬೀಳಿಸುವವರೆಗೆ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎಂದು ಶಪಥ ಮಾಡಿದ್ದರು. ರೈತಪರ ಸರ್ಕಾರ ಬೀಳಿಸಿದ ಅವರಿಗೆ ನಾಚಿಕೆಯಾಗಬೇಕು” ಎಂದಿದ್ದಾರೆ.

“ಕುಮಾರಸ್ವಾಮಿ ಇಲ್ಲಿಂದಲೇ ಸ್ಪರ್ಧಿಸುತ್ತಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಾರೆ. ಯೋಗೇಶ್ವರ್ ಅವರು ಕಾಂಗ್ರೆಸ್‌ನಿಂದಾದರೂ ಸ್ಪರ್ಧಿಸಲಿ ಅಥವಾ ಬಿಜೆಪಿಯಿಂದಾದರೂ ಅಖಾಡಕ್ಕಿಳಿಯಲಿ ಗೆಲುವು ನಮ್ಮದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.//////