Belagavi News In Kannada | News Belgaum

ಮೊದಲ ಕಾಂಗ್ರೆಸ್ ಪಟ್ಟಿಯಲ್ಲಿ 6 ಜನ ಮಹಿಳಾ ಅಭ್ಯರ್ಥಿಗಳು ಕಣಕ್ಕೆ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ಸಿನ ಬಹು ನಿರೀಕ್ಷಿತ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಶನಿವಾರ ಬೆಳಗ್ಗೆ ಕೆಪಿಸಿಸಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

 

 

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಒಟ್ಟು 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಹಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರನ್ನು ಹಾಗೆ ಉಳಿಸಿಕೊಂಡಿದೆ. ಮತ್ತಷ್ಟು ಕ್ಷೇತ್ರಗಳಿಗೆ ಹೊಸ ಮುಖ ಪರಿಚಯ ಮಾಡಿಸಿದೆ. ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಮೀಸಲಾತಿ ನೀಡಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ಪಕ್ಷದ ನಾಯಕರು ಈ ಹಿಂದೆ ತಿಳಿಸಿದ್ದರು. ಹಾಗಾದರೆ, ಈಗ ಬಿಡುಗಡೆಯಾಗಿರುವ ಪಟ್ಟಿಯಲ್ಲಿರುವ ಮಹಿಳಾ ಅಭ್ಯರ್ಥಿಗಳು ಈ ಕೆಳಗಿನಂತಿದ್ದಾರೆ.

 

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿರುವ ಮಹಿಳಾ ಅಭ್ಯರ್ಥಿಗಳು ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್‌, ಖನೀಜ ಫಾತಿಮಾ, ಸೌಮ್ಯ ರೆಡ್ಡಿ, ರೂಪಕಲಾ ಎಂ ಮತ್ತು ಕುಸುಮಾ ಟಿಕೆಟ್ ಪಡೆದಿದ್ದಾರೆ.

 

ಲಕ್ಷ್ಮೀ ಹೆಬ್ಬಾಳ್ಕರ್: ಬೆಳಗಾವಿ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ. ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದ ಅವರು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಏರಿದವರು. 1975ರಲ್ಲಿ ಬೆಳಗಾವಿಯಲ್ಲಿ ಜನಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಮೈಸೂರು ವಿಶ್ವವಿದ್ಯಾಲಯದಿಂದ ಪೊಲಿಟಿಕಲ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

 

2013 ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಳಿದು ಸೋಲು ಕಂಡಿದ್ದರು, ಬಳಿಕ 2014 ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿದು ಅಲ್ಲೂ ಸೋಳು ಕಂಡರು. ಪ್ರಯತ್ನ ಬಿಡದ ಅವರು 2018 ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ, ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. 2015 ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾಗಿದ್ದರು. ಈ ಬಾರಿಯೂ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

 

ಅಂಜಲಿ ನಿಂಬಾಳ್ಕರ್: ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್. ಕರ್ನಾಟಕದ ಮಹಿಳಾ ಶಾಸಕಿಯರಲ್ಲಿ ಒಬ್ಬರು. ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ಪತ್ನಿ. 2018ರ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದಿಂದ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಅಂಜಲಿ ನಿಂಬಾಳ್ಕರ್ 36,649 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

 

ಕಾಂಗ್ರೆಸ್ ಪಕ್ಷದಿಂದ ಬೆಳಗಾವಿಯಲ್ಲಿ ಗೆದ್ದ ಇಬ್ಬರು ಮಹಿಳಾ ಶಾಸಕಿಯರಲ್ಲಿ ಅಂಜಲಿ ನಿಂಬಾಳ್ಕರ್ ಸಹ ಒಬ್ಬರು. 2018 ಖಾನಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಜಲಿ ನಿಂಬಾಳ್ಕರ್ ಗೆಲುವು ದಾಖಲಿಸಿದ್ದರು. 2020 ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಈ ಬಾರಿ ಮತ್ತೆ ಖಾನಾಪುರದಿಂದ ಕಣಕ್ಕೆ ಇಳಿಯಲಿದ್ದಾರೆ.

 

ಖನೀಜ್ ಫಾತಿಮಾ: ಗುಲ್ಬರ್ಗಾ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ ಈ ಬಾರಿಯೂ ಅದೇ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಅವರ ಪತಿ ಡಾ ಕಮರ್ ಉಲ್ ಇಸ್ಲಾಂ ನಿಧನದ ನಂತರ, ಫಾತಿಮಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಆರಂಭದಲ್ಲಿ ನಿರಾಕರಿಸಿದ್ದರು. ಆದರೆ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ.ಪರಮೇಶ್ವರ್ ಅವರ ಮನವೊಲಿಸಿ ಕಳೆದ ಚುನಾವಣೆಯಲ್ಲಿ ಕಣಕ್ಕೆ ಇಳಿಸಿದ್ದರು.

 

ರಾಜಕೀಯ ನಾಯಕರ ಜೊತೆಗೆ ಎಲ್ಲ ಸಮುದಾಯದ ಜನರು ಖನೀಜ್ ಫಾತಿಮಾ ಸ್ಪರ್ಧಿಸುವಂತೆ ಮನವೊಲಿಸಿದರು. ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಶಾಸಕ ಅಜಯ್ ಸಿಂಗ್, ವಾಹೇದ್ ಅಲಿ ಫತೇಖಾನಿ, ಬಾಬಾ ನಜರ್ ಮಹಮ್ಮದ್ ಖಾನ್, ಎಚ್‌ಕೆಇ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಮುಂತಾದ ಗುಲ್ಬರ್ಗದ ಹಲವು ಮುಖಂಡರು ಜೊತೆಗಿದ್ದರು. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ ನಾಸಿರ್ ಹುಸೇನ್ ಉಸ್ತಾದ್ ಮತ್ತು ಬಿಜೆಪಿಯ ಚಂದ್ರಕಾಂತ್ ಪಾಟೀಲ್ ವಿರುದ್ಧ 5,940 ಮತಗಳಿಂದ ಗೆದ್ದಿದ್ದಾರೆ.

 

ಸೌಮ್ಯ ರೆಡ್ಡಿ: ಜಯನಗರ ಶಾಸಕಿಯಾದ ಸೌಮ್ಯ ರೆಡ್ಡಿ ಕರ್ನಾಟಕ ಕಾಂಗ್ರೆಸ್‌ ಪಕ್ಷದ ಪ್ರಮುಖ ಮಹಿಳಾ ನಾಯಕಿಯರಲ್ಲಿ ಒಬ್ಬರು. ವಿದ್ಯಾವಂತ ರಾಜಕಾರಣಿಯಾಗಿರುವ ಸೌಮ್ಯ ರೆಡ್ಡಿ ರಾಜಕೀಯ ಜೊತೆಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ತಮ್ಮ ಅಭಿವೃದ್ಧಿ ಕೆಲಸ ಹಾಗೂ ಹೋರಾಟಗಳಿಂದ ಜನ ಮನ್ನಣೆ ಗಳಿಸಿರುವ ಇವರಿಗೆ ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ನೀಡಿದೆ.

 

2014ರಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಸೌಮ್ಯ ರೆಡ್ಡಿ ರಾಜಕೀಯದತ್ತ ಒಲವು ತೋರಿದರು. ಪುತ್ರಿಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ರಾಮಲಿಂಗ ರೆಡ್ಡಿ ಸಾಥ್ ನೀಡಿದ್ದರು. ಬಳಿಕ 2016ರಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾದರು. 2018 ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸೌಮ್ಯರೆಡ್ಡಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿ ಗೆಲುವು ದಾಖಲಿಸಿದ್ದರು’

 

ರೂಪಕಲಾ ಎಂ: ಕೆಜಿಎಫ್ ಕ್ಷೇತ್ರದಿಂದ ಈ ಬಾರಿಯೂ ಹಾಲಿ ಶಾಸಕಿ ರೂಪಕಲಾ ಎಂ ಅವರಿಗೆ ಟಿಕೆಟ್ ಘೊಷಣೆಯಾಗಿದೆ. ಕಳೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ರೂಪಕಲಾ ಎಂ ಅವರು ಬಿಜೆಪಿಯ ಅಶ್ವಿನಿ ಸಂಪಂಗಿ ವಿರುದ್ಧ ಸ್ಪರ್ಧಿಸಿ 40,827 ಮತಗಳ ಅಂತರದಿಂದ ಗೆಲುವು ಕಂಡಿದ್ದರು.

 

ಕುಸುಮಾ: ಬೆಂಗಳೂರು ನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜರಾಜೇಶ್ವರಿ ನಗರ (ಆರ್. ಆರ್. ನಗರ)ದಿಂದ ಈ ಬಾರಿ ಕಾಂಗ್ರೆಸ್ ಕುಸುಮಾ ಹನುಂತರಾಯಪ್ಪ ಅವರಿಗೆ ಟಿಕೆಟ್ ಘೋಷಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಿರೀಕ್ಷೆ ಮಾಡಲಾಗಿದೆ.

 

2020ರಲ್ಲಿ ಉಪ ಚುನಾವಣೆಯಲ್ಲಿ ಸೋತರೂ ಕ್ಷೇತ್ರದಲ್ಲಿ ಸಕ್ರಿಯರಾಗಿರುವ, ಸಾಮಾಜಿಕ ಜಾಲತಾಣದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಯುವ ನಾಯಕಿ ಕುಸುಮಾ ಹನುಂತರಾಯಪ್ಪ.