ಪಂಚಮಸಾಲಿ ಮುಷ್ಕರ ಅಂತ್ಯ : ಕಣ್ಣೀರಿಟ್ಟ ಜಯಮೃತ್ಯುಂಜಯ ಶ್ರೀ

ಬೆಂಗಳೂರು: ಪಂಚಮಸಾಲಿಗಳಿಗೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಸಮಾಧಾನಗೊಂಡಿರುವ ಜಯಮೃತ್ಯುಂಜಯ ಸ್ವಾಮೀಜಿ ಅವರು ಮುಷ್ಕರವನ್ನು ಅಂತ್ಯಗೊಳಿಸಲಾಗಿದೆ ಎಂದು ಘೋಷಿಸಿದರು.
ಈ ಘೋಷಣೆ ಹೊರಬಿದ್ದ ಬೆನ್ನಲ್ಲೇ ಪಂಚಮಸಾಲಿ ಸಮುದಾಯದ ಕೆಲ ಮುಖಂಡರು ಹೋರಾಟ ಅಂತ್ಯಗೊಳಿಸಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಈ ವೇಳೆ ಸ್ವಾಮೀಜಿ ಎದುರೇ ಕೆಲ ಮುಖಂಡರ ನಡುವೆ ಜಟಾಪಟಿ ಏರ್ಪಟ್ಟಿತು.
ಪಂಚಮಸಾಲಿ ಮುಖಂಡರು ಹಾಗೂ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತಿನ ಜಟಾಪಟಿ ನಡೆದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸಭೆಯಿಂದ ಅರ್ಧಕ್ಕೆ ಹೊರ ನಡೆದ ಪ್ರಸಂಗ ಫ್ರೀಡಂ ಪಾರ್ಕ್‍ನಲ್ಲಿ ಶನಿವಾರ ನಡೆದಿದೆ.
ಸರ್ಕಾರ ಶುಕ್ರವಾರ ಮೀಸಲಾತಿ ಪ್ರಕಟಿಸಿದ ಹಿನ್ನಲೆಯಲ್ಲಿ, ಫ್ರೀಡಂ ಪಾರ್ಕ್‍ನಲ್ಲಿಪಂಚಮಸಾಲಿ ಮುಖಂಡರು ಹಾಗೂ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಕುರಿತಾಗಿ ಸ್ವಾಮೀಜಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪ್ರತಿಭಟನೆ ಕೈಬಿಡಲು ನಿರ್ಧರಿಸಲಾಯಿತು. ಆದರೆ ಇದಕ್ಕೆ ವಿಜಯಾನಂದ ಕಾಶಪ್ಪನವರ್ ವಿರೋಧ ವ್ಯಕ್ತಪಡಿಸಿದರು.
ವಿಜಯಾನಂದ ಕಾಶೆಪ್ಪನವರ್ ಮಾತನಾಡಿ, ನಾವು ಕೇಳಿರುವುದು 15% ಮೀಸಲಾತಿ. ಆದರೆ ಈಗ 7% ನೀಡಲಾಗಿದೆ. ಇದು ಚುನಾವಣಾ ತಂತ್ರ ಆಗಿರಬಹುದು. ನೋಟಿಫಿಕೇಶನ್ ಆಗಲಿ. ಬೇರೆ ಸಮುದಾಯದಿಂದ ಕಿತ್ತುಕೊಂಡು ನಮಗೆ ಮೀಸಲಾತಿ ಕೊಡುವುದು ಬೇಕಾಗಿಲ್ಲ. ಈಗ ಕೇವಲ 2% ಮಾತ್ರ ಮೀಸಲಾತಿ ಸಿಕ್ಕಂತಾಗಿದೆ. ಮುಸ್ಲಿಮರ ಮೀಸಲಾತಿಯನ್ನು ಕಸಿದು ನಮಗೆ ಕೊಟ್ಟಿದ್ದಾರೆ.
ಆ ಮೂಲಕ ಮುಸ್ಲಿಮರು ಮತ್ತು ನಮ್ಮ ನಡುವೆ ಜಗಳ ತಂದಿಡುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ವಿಚಾರವಾಗಿ ವಿಜಯಾನಂದ ಹಾಗೂ ಯತ್ನಾಳ್ ನಡುವೆ ವಾಕ್ಸ್‌ಮರ ನಡೆಯಿತು.
ಕಣ್ಣೀರಿಟ್ಟ ಸ್ವಾಮೀಜಿ: ಹೋರಾಟ ಅಂತ್ಯಗೊಳಿಸಿ ನಂತರ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ ಭಾವುಕರಾದರು. ಮಾತನಾಡುತ್ತಾ ಕಣ್ಣೀರಿಟ್ಟರು. ದೇವರು ನಮಗೆ 2% ಮೀಸಲಾತಿಯನ್ನು ಕರುಣಿಸಿದ್ದಾರೆ. ಹೊಟ್ಟೆ ತುಂಬಾ ಊಟ ಸಿಕ್ಕಿಲ್ಲ. ಆದರೆ ಹಸಿದ ಹೊಟ್ಟೆಗೆ ಪ್ರಸಾದ ಸಿಕ್ಕಿದಂತೆ ಆಗಿದೆ.
ನೀತಿಸಂಹಿತೆ ಜಾರಿಯಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಮುಂದೆ ಯಾವ ಸರ್ಕಾರ ಆಡಳಿತಕ್ಕೆ ಬರುತ್ತದೆಯೋ ಗೊತ್ತಿಲ್ಲ. ದೊಡ್ಡ ದೊಡ್ಡ ಮಠದವರು ನನಗೆ ಬೆಂಬಲ ಕೊಟ್ಟಿಲ್ಲ. ನಮ್ಮ ಹೋರಾಟದ ಪರಿಣಾಮ ಇಡೀ ಲಿಂಗಾಯಿತ ಸಮುದಾಯಕ್ಕೆ ಅನುಕೂಲವಾಗಿದೆ. ಚುನಾವಣೆ ಮುಗಿದ ನಂತರ ಹೋರಾಟ ಮುಂದುವರೆಸೋಣ ಎಂದರು.