Belagavi News In Kannada | News Belgaum

24 ಗಂಟೆ ಪೊಲೀಸ್‍ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ: ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸ್‍ರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯಾರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು.

ರವಿವಾರದಂದು ತಾಲೂಕಿನ ಕುಲಗೋಡ ಗ್ರಾಮದಲ್ಲಿ 1.32 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಕುಲಗೋಡ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಗಡಿ ರಕ್ಷಣೆಗೆ ಹೋರಾಡುತ್ತಿರುವ ಸೈನಿಕರಂತೆ ಪೊಲೀಸರು ಸಹ ದಿನದ 24 ತಾಸು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಕರ್ನಾಟಕದ ಪೊಲೀಸರು ಅಪರಾಧ ತಡೆಗಟ್ಟುವಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಅಪರಾಧ ಚಟುವಟಿಕೆಗಳಿಗೆ ಪೊಲೀಸ್‍ರು ನಿಗಾವಹಿಸುತ್ತಿದ್ದಾರೆ. ಸಾರ್ವಜನಿಕರು ಸಹ ಪೊಲೀಸರೊಂದಿಗೆ ಉತ್ತಮ ಕೆಲಸಗಳಿಗಾಗಿ ಬೆಂಬಲ ನೀಡುವಂತೆಯೂ ಅವರು ತಿಳಿಸಿದರು.

ನಮ್ಮ ರಾಜ್ಯದಲ್ಲಿ ಗುಪ್ತಚರ ಇಲಾಖೆಯೂ ಸಹ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಆದ್ದರಿಂದ ಈ ಇಲಾಖೆಗೆ ಇನ್ನೂ ಹೆಚ್ಚಿನ ಅಧಿಕಾರ ನೀಡುವಂತೆಯೂ ಇದೇ ಸಂದರ್ಭದಲ್ಲಿ ಮನವಿ ಮಾಡಿದ ಅವರು, ಪೊಲೀಸರ ಬಗ್ಗೆ ಸಮಾಜದ ಗೌರವ, ಅಭಿಮಾನ ಇದೆ. ಪೊಲೀಸರು ಸಹ ಸಾರ್ವಜನಿಕರೊಂದಿಗೆ ಉತ್ತಮ ಸೌಹಾರ್ದಯುತವಾಗಿ ನಡೆದುಕೊಳ್ಳುವಂತೆ ಅವರು ಹೇಳಿದರು. 

ಕರ್ನಾಟಕದ ಪ್ರಸಿದ್ಧ ಸವದತ್ತಿ ಯಲ್ಲಮ್ಮಾದೇವಿ ದೇವಸ್ಥಾನಕ್ಕೆ ಆಗಮಿಸುವ ಅಂತರರಾಜ್ಯ ಭಕ್ತಾಧಿಗಳಿಗೆ ಯಾವುದೇ ತೊಂದರೆಯುಂಟಾಗದಿರಲು ಉನ್ನತ ಮಟ್ಟದ ಅಧಿಕಾರಿಗಳು ಸಂಬಂಧಿಸಿದವರಿಗೆ ಸೂಚನೆ ನೀಡಬೇಕು. ನಮ್ಮ ರಾಜ್ಯಕ್ಕೆ ಆಗಮಿಸುವ ಭಕ್ತ ವೃಂದರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಪೊಲೀಸ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. 

ಪ್ರಾಸ್ತಾವಿಕವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರು ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ವೇಣುಗೋಪಾಲ, ಜಿಲ್ಲಾ ಸಶಸ್ತ್ರ ಪಡೆಯ ವರಿಷ್ಠಾಧಿಕಾರಿ ಎಸ್.ವ್ಹಿ. ಯಾದವ, ಪೊಲೀಸ್ ಉಪಾಧೀಕ್ಷಕ ಡಿ.ಎಚ್. ಮುಲ್ಲಾ, ಸಹಾಯಕ ಕಾರ್ಯಪಾಲಕ ಅಭಿಯಂತರ ವಾಸುದೇವ ವ್ಹಿ.ಎಚ್, ಕುಲಗೋಡ ಗ್ರಾಪಂ ಅಧ್ಯಕ್ಷೆ ವಿಮಲಾ ಸಸಾಲಟ್ಟಿ, ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ, ಕುಲಗೋಡ ಪಿಎಸ್‍ಐ ಜಿ.ಎಸ್. ಪಾಟೀಲ, ಮೂಡಲಗಿ ಪಿಎಸ್‍ಐ ಸೋಮೇಶ ಗೆಜ್ಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಹಿರಿಯ ಮುಖಂಡ ಎ.ಕೆ. ನಾಯಿಕ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯಪ್ಪ ಬಡ್ನಿಂಗಗೋಳ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಜಿಪಂ ಮಾಜಿ ಸದಸ್ಯರಾದ ಗೋವಿಂದ ಕೊಪ್ಪದ, ರಾಜೇಂದ್ರ ಸಣ್ಣಕ್ಕಿ, ತಾಪಂ ಮಾಜಿ ಸದಸ್ಯ ಸುಭಾಸ ವಂಟಗೋಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಪುಟ್ಟಣ ಪೂಜೇರಿ, ತಮ್ಮಣ್ಣ ದೇವರ, ಸತೀಶ ವಂಟಗೋಡಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಪ್ರಭಾಶುಗರ ನಿರ್ದೇಶಕರಾದ ಎಂ.ಆರ್. ಭೋವಿ, ಗಿರೀಶ ಹಳ್ಳೂರ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಅಶೋಕ ಉದ್ದಪ್ಪನವರ, ಈರಣ್ಣಾ ಜಾಲಿಬೇರಿ, ಎಸ್.ಬಿ. ಲೋಕನ್ನವರ, ರಂಗಪ್ಪ ಕಳ್ಳಿಗುದ್ದಿ ಸೇರಿದಂತೆ ಕುಲಗೋಡ ಠಾಣಾ ವ್ಯಾಪ್ತಿಯ ಅನೇಕ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.