ಬೆಳಗಾವಿಯಲ್ಲಿ ರಸ್ತೆ ತಡೆ ನಡೆಸಿ ನ್ಯಾಯವಾದಿಗಳಿಂದ ಪ್ರತಿಭಟನೆ

ಬೆಳಗಾವಿ: ಯುವ ವಕೀಲರೊಬ್ಬರಿಗೆ ಪೊಲೀಸರು ಥಳಿಸಿರುವುದನ್ನು ವಿರೋಧಿಸಿ ನಗರದಲ್ಲಿ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಮುಂಭಾಗ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಹಿರಿಯ ವಕೀಲ ಆರ್. ಪ. ಪಾಟೀಲ್ ಮಾತನಾಡಿ, ರಾಮದುರ್ಗದ ಯುವ ವಕೀಲ ಈರಣ್ಣ ಪೂಜಾರಿ ಪ್ರಸ್ತುತ ಬೆಳಗಾವಿಯಲ್ಲಿ ವೃತ್ತಿ ನಡೆಸುತ್ತಿದ್ದು, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಠಾಣೆಯ ಹಿಂದೆ ವಾಹನ ನಿಲ್ಲಿಸಿದ್ದರು. ಈ ವೇಳೆ ಮಹಿಳಾ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿ ವಾಹನ ತೆಗೆಯುವಂತೆ ಹೇಳಿದ್ದಾರೆ. ವಾದ ವಿವಾದ ನಡೆದು ಮಹಿಳಾ ಕಾನ್ಸ್ಟೇಬಲ್ ಇಬ್ಬರು ಪುರುಷ ಪೊಲೀಸರೊಂದಿಗೆ ಆಗಮಿಸಿ ಯುವ ನ್ಯಾಯವಾದಿಯನ್ನು ಥಳಿಸಿರುವುದು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಬೆಳಗಾವಿಯಲ್ಲಿ ಪೊಲೀಸ್ ವ್ಯವಸ್ಥೆ ಹಾಳಾಗಿದೆ. ವಕೀಲರನ್ನು ಪೊಲೀಸರು ಥಳಿಸಿದ ಘಟನೆಗಳು ನಡೆಯುತ್ತಿವೆ. ಎಂಟು ದಿನಗಳ ಹಿಂದೆಯಷ್ಟೇ ಶಹಾಪುರದಲ್ಲಿ ಮಹಿಳಾ ವಕೀಲರೊಬ್ಬರಿಗೆ ಪೊಲೀಸರು ಥಳಿಸಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಆ ನಂತರ ಇದು ಎರಡನೇ ಘಟನೆಯಾಗಿದೆ. ಸಿಇಎನ್ ಸೆಲ್ ನ ಇಬ್ಬರು ಪೊಲೀಸರು ವಿನಾಕಾರಣ ಥಳಿಸಿದ್ದರಿಂದ ಪೂಜಾರಿ ತೀವ್ರವಾಗಿ ಗಾಯಗೊಂಡಿದ್ದರು. ಬೆಳಗಾವಿ ಪೊಲೀಸ್ ಕಮಿಷನರೇಟ್ ಆದಾಗಿನಿಂದ ಬೆಳಗಾವಿಯಲ್ಲಿ ಪೊಲೀಸರು ಹಿಟ್ಲರ್ ಆಡಳಿತ ಆರಂಭಿಸಿದ್ದಾರೆ. ಅವರು ಯಾರ ಕೈಗೊಂಬೆಯಾಗಿ ಕೆಲಸವನ್ನು ಮಾಡುತ್ತಿದ್ದಾರೆಂದು ಆರೋಪಿಸಿದರು.
ಇದೇ ವೇಳೆ ಸಿಪಿಐ ಹಾಗೂ ಡಿಸಿಪಿ ಶೇಖರ್ ಪ್ರತಿಭಟನಾ ನಿರತ ವಕೀಲರನ್ನು ಭೇಟಿ ಮಾಡಿ ಪ್ರತಿಭಟನೆ ತಿಳಿಗೊಳಿಸಿದರು. ಆದರೆ ವಕೀಲರು ಅವರ ಮಾತನ್ನು ಕೇಳಲಿಲ್ಲ. ಆ ಬಳಿಕ ವಕೀಲರ ಸಂಘದ ಕಚೇರಿಗೆ ಥಳಿಸಿದ ಇಬ್ಬರು ಪೊಲೀಸರನ್ನು ಕರೆಸಲಾಯಿತು. ಘಟನೆಗೆ ಸಂಬಂಧಿಸಿದಂತೆ ವಕೀಲರ ಬಳಿ ಕ್ಷಮೆ ಯಾಚಿಸಿದ ನಂತರ ಪ್ರಕರಣವನ್ನು ಕೈಬಿಡಲಾಯಿತು./////