ಶಾಸಕ ರಮೇಶ್ ಜಾರಕಿಹೊಳಿಗೆ ಠಕ್ಕರ್ ಕೊಡಲು ಮುಂದಾಗಿದ್ದ ಸವದಿಗೆ ಬ್ರೇಕ್ ಹಾಕಿದ ಹೈಕಮಾಂಡ್

ಬೆಳಗಾವಿ: ಅಥಣಿ ಟಿಕೆಟ್ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಧ್ಯೆ ಜಂಗೀಕುಸ್ತಿ ಪೈಪೋಟಿ ನಡೆಯುತ್ತಿದ್ದು, ಇಷ್ಟು ದಿನ ಸೈಲೆಂಟ್ ಆಗಿದ್ದ ಸವದಿ ಸಮಾವೇಶವನ್ನು ಮಾಡಿ ಜನಾಭಿಪ್ರಾಯ ಪಡೆದು ನಾನು ಟಿಕೆಟ್ ಕೇಳಬೇಕೋ ಬೇಡವೋ ಎಂಬ ನಿರ್ಧಾರ ಮಾಡುತ್ತೇನೆ ಎಂದಿದ್ದರು. ಆದರೆ ಇದಕ್ಕೆ ರಮೇಶ್ ಜಾರಕಿಹೊಳಿ ಬ್ರೇಕ್ ಹಾಕಿಸಿದ್ದಾರೆ.
ಹೌದು…ಶಾಸಕ ರಮೇಶ್ ಜಾರಕಿಹೊಳಿ ಕೇವಲ ತಮ್ಮ ಗೋಕಾಕ್ ಕ್ಷೇತ್ರ ಮಾತ್ರವಲ್ಲದೇ ಬೆಳಗಾವಿ ಜಿಲ್ಲೆ ರಾಜಕಾರಣದಲ್ಲಿ ತಮ್ಮದೇ ಹಿಡಿತ ಹೊಂದಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಸ್ವಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಪಕ್ಷೇತರ ಅಭ್ಯರ್ಥಿ ತಮ್ಮ ಸಹೋದರನನ್ನು(ಲಖನ್ ಜಾರಕಿಹೊಳಿ) ಗೆಲ್ಲಿಸಿ ತಮ್ಮ ಶಕ್ತಿ ತೋರಿಸಿದ್ದರು. ಇದೀಗ ಈ ಬಾರಿ ಚುನಾವಣೆಯಲ್ಲಿ ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಮಹೇಶ್ ಕುಮಟಳ್ಳಿಗೆ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇತ್ತ ಲಕ್ಷ್ಮಣ ಸವದಿ ಸಹ ಅಥಣಿ ಟಿಕೆಟ್ಗೆ ಕಸರತ್ತು ನಡೆಸಿದ್ದಾರೆ. ವಿವಿಧ ಸಮುದಾಯಗಳ ಸಭೆ ಮಾಡುವ ಮೂಲಕ ರಮೇಶ್ ಜಾರಕಿಹೊಳಿಗೆ ಠಕ್ಕರ್ ಕೊಡಲು ಮುಂದಾಗಿದ್ದ ಸವದಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಬಿಜೆಪಿ ಹೈಕಮಾಂಡ್, ಲಕ್ಷ್ಮಣ ಸವದಿಗೆ ದೂರವಾಣಿ ಕರೆ ಮಾಡಿ ಯಾವುದೇ ಸಮುದಾಯದ ಸಭೆ ಮಾಡದಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಹೈಕಮಾಂಡ್ ಮೂಲಕ ಸವದಿಗೆ ಚೆಕ್ ಮೆಟ್ ಕೊಟ್ರಾ ಎನ್ನುವ ಚರ್ಚೆಗಳು ಶುರುವಾಗಿವೆ.
ಅಥಣಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಂಬಂಧ ವಿವಿಧ ಸಮುದಾಯಗಳ ಲಕ್ಷ್ಮಣ ಸವದಿ ಸಭೆ ಮಾಡಿ ತೀರ್ಮಾನಿಸುವುದಾಗಿ ಹೇಳಿದ್ದರು. ಸವದಿ ಆ್ಯಕ್ಟೀವ್ ಆಗ್ತಿದ್ದಂತೆ ಅಲರ್ಟ್ ಆದ ರಮೇಶ್ ಜಾರಕಿಹೊಳಿ ಈ ಬಗ್ಗೆ ಹೈಕಮಾಂಡ್ಗೆ ದೂರು ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಕೆಲ ದಿನಗಳ ಹಿಂದಷ್ಟೇ ಅಮಿತ್ ಶಾ ಗೆ ಭೇಟಿಯಾಗಿ ಈ ವಿಚಾರ ಗಮನಕ್ಕೆ ತಂದಿದ್ದರು. ಇದೀಗ ಹೈಕಮಾಂಡ್ ಕರೆ ಮಾಡಿ ಯಾವುದೇ ಸಭೆ ಸಮಾರಂಭ ಮಾಡದಂತೆ ಎಚ್ಚರಿಕೆ ನೀಡಿದೆ. ಬೆಳಗಾವಿ ರಾಜಕಾರಣದಲ್ಲಿ ಮಾತ್ರವಲ್ಲ. ರಾಜ್ಯ ರಾಜಕಾರಣದ ಮೇಲೂ ಪ್ರಭಾವ ಬೀರುವಷ್ಟು ರಮೇಶ್ ಜಾರಕಿಹೊಳಿ ಸಮರ್ಥರಿದ್ದಾರೆ. ಮೈತ್ರಿ ಸರ್ಕಾರ ಮುರಿದು ಬಿಜೆಪಿ ಅಧಿಕಾರಕ್ಕೆ ಬರಲು ರಮೇಶ್ ಜಾರಕಿಹೊಳಿ ಪಾತ್ರ ಸಹ ದೊಡ್ಡದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಮೇಶ್ ಜಾರಕಿಹೊಳಿ ಮಾತಿಗೆ ಮನ್ನಣೆ ನೀಡಿದೆ ಎನ್ನಲಾಗುತ್ತಿದೆ. ಹೈಕಮಾಂಡ್ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಅಂತಿದ್ದ ಲಕ್ಷ್ಮಣ ಸವದಿಯನ್ನ ರಮೇಶ್ ಜಾರಕಿಹೊಳಿ ಸೈಲೆಂಟ್ ಮಾಡಿಸಿದ್ದಾರೆ.
ಒಟ್ಟಿನಲ್ಲಿ ಅಥಣಿಗಾಗಿ ಇಬ್ಬರೂ ನಾಯಕರ ಮಧ್ಯೆ ಟಿಕೆಟ್ ಫೈಟ್ ಜೋರಾಗಿಯೇ ನಡೆಯುತ್ತಿದ್ದು, ಈ ಆರದ ಗಾಯಕ್ಕೆ ಹೈ ಕಮಾಂಡ್ ಯಾವ ಮುಲಾಮು ಹುಚ್ಚುತ್ತೆ ಕಾದು ನೋಡಬೇಕು.///////