Belagavi News In Kannada | News Belgaum

ದಿ. ಆರ್.ಧ್ರುವನಾರಾಯಣ ಮಾನವೀಯ ಮೌಲ್ಯಗಳ ವ್ಯಕ್ತಿತ್ವವುಳ್ಳ ರಾಜಕಾರಣಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಮೈಸೂರು: ಪ್ರಾಮಾಣಿಕ, ಶಿಸ್ತಿನ ಸಿಪಾಯಿ. ನಾಡು ಕಂಡ ಅಪರೂಪದ ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದ ಧ್ರುವನಾರಾಯಣ ಸದಾ ನಗುಮುಖದಿಂದ ಇರುತ್ತಿದ್ದರು. ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷರಾಗಿ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಅವರು ಅತ್ಯಂತ ಪ್ರಾಮಾಣಿಕ ಮತ್ತು ಶಿಸ್ತಿನ ಸಿಪಾಯಿಯಾಗಿದ್ದರು. ಮಾನವೀಯ ಮೌಲ್ಯಗಳ ವ್ಯಕ್ತಿತ್ವವುಳ್ಳ ರಾಜಕಾರಣಿ. ಎಂದೂ ದ್ವೇಷದ ರಾಜಕಾರಣ ಮಾಡಿದವರಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಹೆಚ್.ಡಿ ಕೋಟೆ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿ. ಆರ್.ಧ್ರುವನಾರಾಯಣ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧ್ರುವನಾರಾಯಣ ಅತ್ಯಂತ ಸಜ್ಜನ ರಾಜಕಾರಣಿ. ನನಗೆ ಆತ್ಮೀಯರಾಗಿದ್ದ ಅವರು ಸಾಮಾಜಿಕ ಬದ್ಧತೆಯಿಂದ ಜನಾನುರಾಗಿಯಾಗಿ ಎಲ್ಲರ ಪ್ರೀತಿ ಸಂಪಾದಿಸಿದ್ದರು. ಎರಡು ಬಾರಿ ಶಾಸಕ, ಎರಡು ಬಾರಿ ಸಂಸದರಾಗಿ ಜನರ ಆಶೋತ್ತರಗಳಿಗೆ ಧನಿಯಾಗಿದ್ದರು. ಅಧಿಕಾರ ಇಲ್ಲದಿದ್ದಾಗಲೂ ಜನರಿಂದ ದೂರವಾಗದೆ, ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಸ್ಮರಿಸಿದರು. 

 

ರಾಜಕಾರಣ ಅಂದರೆ ಸೇವೆ. ಅಂತಹ ವ್ಯಕ್ತಿತ್ವವನ್ನು ದಿ. ಆರ್. ಧ್ರುವನಾರಾಯಣ ಹೊಂದಿದ್ದರು. ಅವರು ನಮಗೂ ಸ್ಫೂರ್ತಿಯಾಗಿದ್ದಾರೆ ಎಂದ ಅವರು, ಆದರೆ ವಿಧಿಯಾಟದಿದಂದ ಅವರನ್ನು ನಾವು ಕಳೆದುಕೊಂಡಿದ್ದು, ಅವರ ಸ್ಥಾನವನ್ನು ಅವರ ಮಗ ದರ್ಶನ್‌ ತುಂಬಬೇಕು. ದರ್ಶನ್‌ ಗೆ ಕಾರ್ಯರ್ಕರು ಶಕ್ತಿ ನೀಡಬೇಕೆ ಕರೆ ನೀಡಿದರು.

ದಿವಂಗತ ಆರ್. ಧ್ರುವನಾರಾಯಣ ಪುತ್ರ ದರ್ಶನ್‌  ಮಾತನಾಡಿ, `ನಮ್ಮ ತಂದೆ ನಮ್ಮೊಂದಿಗೆ ದೈಹಿಕವಾಗಿ ಇಲ್ಲ. ಆದರೆ ಮಾನಸಿಕವಾಗಿ ಇದ್ದಾರೆ. ನಮ್ಮ ತಂದೆಯವರ ಅಂತಿಮ ಕಾರ್ಯಕ್ಕೆ ರಾಜ್ಯಾದ್ಯಂತ ಜನ ಬಂದಿದ್ದರು. ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಾರಕಿಹೊಳಿ ಅವರು ಸೇರಿದಂತೆ ಎಲ್ಲರಿಗೂ ನಾನು ಧನ್ಯವಾದ, ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಭಾವುಕರಾದರು.

 

ನನ್ನ ತಂದೆ ನನಗೆ ಯಾವತ್ತೂ ರಾಜಕೀಯ ಪಾಠ ಹೇಳಿಕೊಡಲಿಲ್ಲ. ಅವರ ಜನಸೇವೆಯನ್ನ ನೋಡಿ ಬೆಳೆದವನು ನಾನು. ನಮ್ಮ ಇಡೀ ಕುಟುಂಬ ಜನಸೇವೆ ಮಾಡುತ್ತಾ ಬಂದಿದೆ. ಇನ್ನಷ್ಟು ಪ್ರಾಮಾಣಿಕ ಪ್ರಯತ್ನ ಮಾಡಲು ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ. ನನ್ನ ತಂದೆಯ ಮೇಲೆ ಇಟ್ಟಂತೆ ನನ್ನ ಮೇಲೆ ನಂಬಿಕೆ ಇಡಿ. ಉಳಿಸಿಕೊಂಡು ಹೋಗುತ್ತೇನೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕ ಅನಿಲ್ ಚಿಕ್ಕಮಾದು, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ ವಿಜಯಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು./////