Belagavi News In Kannada | News Belgaum

ಮತ ಎಣಿಕೆ ಕೇಂದ್ರ: ಸ್ಥಳ‌ ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಸೂಕ್ತ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ

ಬೆಳಗಾವಿ : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ ಎಣಿಕೆ‌ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸ್ಥಳ ಪರಿಶೀಲನೆ ನಡೆಸಿದರು.
ಹಿರಿಯ ಪೊಲಿಸ್ ಅಧಿಕಾರಿಗಳೊಂದಿಗೆ ನಗರದ ಆರ್.ಪಿ.ಡಿ. ಕಾಲೇಜಿಗೆ ಶನಿವಾರ(ಏ.1) ಭೇಟಿ ನೀಡಿದ ಅವರು, ಸ್ಟ್ರಾಂಗ್ ರೂಮ್ ಮತ್ತು ಮತ ಎಣಿಕೆ‌ ಕೇಂದ್ರ ಸ್ಥಾಪನೆ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಕಾಲೇಜಿನ ಆವರಣದಲ್ಲಿರುವ ವಿವಿಧ ಕಟ್ಟಡಗಳನ್ನು ಪರಿಶೀಲಿಸಿದ ಅವರು, ಕಳೆದ ಚುನಾವಣೆಯಲ್ಲಿ ಮಾಡಲಾಗಿದ್ದ ವ್ಯವಸ್ಥೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಈ ಬಾರಿಯೂ ಕೂಡ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಸ್ಟ್ರಾಂಗ್ ರೂಮ್, ಮತ ಎಣಿಕೆ‌ ಕೊಠಡಿ, ಪಾರ್ಕಿಂಗ್ ಮತ್ತಿತರ ಸೌಕರ್ಯಗಳನ್ನು ಒದಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಬಗ್ಗೆ ಸಮಗ್ರ ನೀಲನಕ್ಷೆ ರೂಪಿಸಿದ ಬಳಿಕ ಚುನಾವಣಾ ಆಯೋಗದ ಅನುಮೋದನೆ ಮೇರೆಗೆ ಕೆಲಸಗಳನ್ನು ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಅಗತ್ಯ ಭದ್ರತಾ ಕ್ರಮಗಳು ಮತ್ತು ‌ಪಾರ್ಕಿಂಗ್ ವ್ಯವಸ್ಥೆ ಕುರಿತು ಪರಿಶೀಲಿಸಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಅವರು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಭದ್ರತೆ ಮಾತ್ರವಲ್ಲದೇ ಸಂಚಾರಕ್ಕೆ ವ್ಯತ್ಯಯವಾಗದಂತೆ ಪಾರ್ಕಿಂಗ್ ಮತ್ತಿತರ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭೀಮಾ ನಾಯ್ಕ ಅವರು, ಸ್ಟ್ರಾಂಗ್ ರೂಮ್ ಮತ್ತು ಮತ ಎಣಿಕೆ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಉಪ ವಿಭಾಗಾಧಿಕಾರಿ ಬಲರಾಮ್ ಚವಾಣ, ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ್ ಘಾಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.//////