ಹಾಳು ಬಿದ್ದ ಆಹಾರ ನಿಗಮದ ಸಗಟು ಮಳಿಗೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣ-ಅವ್ಯವಸ್ಥೆಗೊಂಡ ಗೋದಾಮು ತೆರವಿಗೆ ಒತ್ತಾಯ

ಬೈಲಹೊಂಗಲ: ಆಹಾರ ಸಾಮಗ್ರಿ ದಾಸ್ತಾನಕ್ಕಾಗಿ ನಿರ್ಮಾಣಗೊಂಡ ಬ್ರಿಟಿಷರ ಕಾಲದಲ್ಲಿನ ಪಟ್ಟಣದ ಕರ್ನಾಟಕ ಆಹಾರ ನಿಗಮದ ಸಗಟು ಮಳಿಗೆಗಳು ತುಂಬಾ ಶಿಥಿಲಗೊಂಡಿದ್ದರಿಂದ ನಾಗರಿಕರು ಭಯಭೀತರಾಗಿದ್ದು ಭೂತದ ಸ್ಥಳವಾಗಿ ಪರಿಣಮಿಸಿವೆ.
ಹೌದು…. ಬೈಲಹೊಂಗಲ ಪಟ್ಟಣದ ಮುರಗೋಡ ರಸ್ತೆಯಲ್ಲಿನ ಲೋಕೋಪಯೋಗಿ ಕಚೇರಿ ಪಕ್ಕದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಈ ಸಗಟು ಮಳಿಗೆಗಳು ಶಿಥಿಲಗೊಂಡ ಕಾರಣ ತೀರಾ ದುರಾವಸ್ಥೆಯಾಗಿದ್ದು ನಾಗರಿಕರು ಭಯ ಪಡುವಂತೆ ಪರಿವರ್ತನೆಯಾಗಿವೆ.
ಸರಕಾರದ ಆಹಾರ ನಿಗಮಕ್ಕೆ ಒಳಪಡುವ ಈ ಗೋದಾಮು ತುಂಬಾ ಅನಾದರಕ್ಕೊಳಗಾಗಿದ್ದರಿಂದ ಇಲ್ಲಿನ ಸೇವೆಯನ್ನು ಸ್ಥಗಿತಗೊಳಿಸಿ ಎಪಿಎಂಸಿ ಆವರಣದಲ್ಲಿನ ಹೊಸ ಗೋದಾಮುಗಳಿಗೆ ಸ್ಥಳಾಂತರವಾಗಿದ್ದರಿಂದ ಅಂದಿನಿಂದ ಇಂದಿನವರೆಗೆ ಅಧಿಕಾರಿಗಳು ಈಕಡೆ ದೃಷ್ಟಿ ಹರಿಸದ ನಿಮಿತ್ಯ ಈ ಗೋದಾಮು ಕಟ್ಟಡದ ಪರಿಕರಗಳು ಎತ್ತೆತ್ತಲೋ ಬಿದ್ದಿದ್ದು ಸರಕಾರದ ಆಸ್ತಿಗಳು ಯಾವ ರೀತಿ ನಿರುಪಯುಕ್ತವಾಗುತ್ತಿವೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ.
ನಿಷ್ಕ್ರೀಯಗೊಂಡ ಈ ಕಟ್ಟಡದ ಸುತ್ತಲೂ ತಹಶೀಲ್ದಾರ, ಉಪವಿಭಾಗಾಧಿಕಾರಿ, ಲೋಕೋಪಯೋಗಿ, ಡಿವಾಯಎಸ್‍ಪಿ, ನ್ಯಾಯಾಲಯ, ಅಟಲಜೀ ಜನಸ್ನೇಹಿ ಕೇಂದ್ರ, ಆಹಾರ ಪೂರೈಕೆ, ಕಂದಾಯ ನಿರೀಕ್ಷಕರ ಮುಂತಾದ ಮುಖ್ಯ ಸರಕಾರಿ ಕಚೇರಿಗಳು, ನೌಕರರ ಭವನವಿದ್ದು ನಿತ್ಯ ನೂರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಆಗಮಿಸುತ್ತಿದ್ದು ಈ ಗೋದಾಮಿನ ಅವಶೇಷಗಳನ್ನು ಕಂಡು ಹೌಹಾರುತ್ತಿದ್ದಾರೆ.
ಸರಕಾರದ ಯಾವದೇ ಕೆಲಸ ಕಾರ್ಯಗಳ ನಿಮಿತ್ಯ ಈ ಕಟ್ಟಡದ ಪಕ್ಕದಲ್ಲೇ ನಾಗರಿಕರು ಹಾದು ಹೋಗಬೇಕಾಗಿದ್ದರಿಂದ ಇದರ ಪರಿಸ್ಥಿತಿ ನೋಡಿ ಭಯ ಬರುತ್ತಿದೆ. ತಗಡುಗಳು ಸೇರಿದಂತೆ ಗೋದಾಮಿನ ಪರಿಕರಗಳು ಬಿಕಾಬಿಟ್ಟಿ ಬಿದ್ದದ್ದರಿಂದ ಅಪಾಯ ಎದುರಾಗಲಿದ್ದು ಅಧಿಕಾರಿಗಳು ಕೂಡಲೇ ತೆರವುಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. *ಸೋಮಶೇಖರ ಬ್ಯಾಳಿ, ನಾಗರಿಕ ಬೈಲಹೊಂಗಲ
ತಹಶೀಲ್ದಾರ, ಎಸಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಹ ನಿತ್ಯ ಈ ಸ್ಥಳದ ಮುಖಾಂತರವೇ ಹಾದು ಹೋಗುತ್ತಿದ್ದರೂ ಸಹ ಇದರ ಕಡೆಗೆ ಕಿಂಚಿತ್ತು ಗಮನ ಹರಿಸದಿರುವದು ಆಡಳಿತದ ನಿರ್ಲಕ್ಷ್ಯೆಕ್ಕೆ ಹಿಡಿದ ಕನ್ನಡಿಯಾಗಿದೆ. ಈಗಾಗಲೇ ಹಲವು ಅಧಿಕಾರಿಗಳಿಗೆ ದುರಾವಸ್ಥೆ ಕಂಡ ಇವುಗಳ ಬಗ್ಗೆ ತಿಳಿಸಿದರೂ ಸಹ ಕ್ಯಾರೇ ಎಂದಿಲ್ಲ ಎಂದು ತಿಳಿದು ಬಂದಿದೆ.
ನಿಗಮದ ಗೋಡಾವನದ ಪಕ್ಕ ಮತ್ತೊಂದು ಇಲಾಖೆಯ ದಾಸ್ತಾನು ಕಟ್ಟಡವಿದ್ದು ಅದು ಸಹ ಇದೇ ಪರಿಸ್ಥಿತಿ ಅನುಭವಿಸುತ್ತಿದೆ. ಕಟ್ಟಡದ ಅಕ್ಕ ಪಕ್ಕ ಮಧ್ಯವ್ಯಸನಿಗಳು ಸಾರಾಯಿ ಕುಡಿದು ಬಾಟಲಿಗಳನ್ನು ಒಡೆದು ಹಾಕುತ್ತಿರುವದರಿಂದ ನಾಗರಿಕರು ಸಂಚಾರ ಮಾಡಲು ಹರ ಸಾಹಸ ಮಾಡಬೇಕಾಗಿದೆ. ಮುಂಬರುವ ದಿನಗಳಲ್ಲಿ ಮಳೆ ಗಾಳಿ ಬಿಸುವ ಸಂದರ್ಭದಲ್ಲಿಯೂ ಅಪಾಯ ಸಂಭವಿಸುವ ಸಾಧ್ಯತೆ ಇದ್ದು ಅದನ್ನು ತಪ್ಪಿಸಲು ಸಂಭದಪಟ್ಟ ಅಧಿಕಾರಿಗಳು ಕೂಡಲೇ ಕಡೆ ಗಮನ ಹರಿಸಿ ಅವ್ಯವಸ್ಥೆಗೊಂಡ ಈ ಕಟ್ಟಡಗಳನ್ನು ಶೀಘ್ರವೇ ತೆರವುಗೊಳಿಸಿ ಜನರಲ್ಲಿನ ಆತಂಕವನ್ನು ನಿವಾರಿಸಿಬೇಕು. ಇಲ್ಲದೇ ಹೋದರೆ ಹಾಳು ಬಿದ್ದ ಗೋದಾಮಿನಲ್ಲಿ ಹುಳ-ಹುಪ್ಪಡಿಗಳು ಸೇರಿ ಮತ್ತಷ್ಟು ಭಯ ಬೀಳುವ ಸಂಭವ ಎದುರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಜನರ ಪಡಿಪಾಟಲು ತಪ್ಪಿದ್ದಲ್ಲ. ಈ ಗುದಾಮಿನ ಬಗ್ಗೆ ಅಧಿಕಾರಗಳು ಎಷ್ಟು ಮಟ್ಟಿಗೆ ಸರಿಪಡಿಸುತ್ತಾರೋ ಕಾದು ನೋಡೋಣ