Belagavi News In Kannada | News Belgaum

ಬೆಳಗಾವಿ ಜಿಲ್ಲೆ ಟಿಕೆಟ್ ಹಂಚಿಕೆ: ಹೊಸ ಪ್ರಯೋಗಕ್ಕೆ ಮುಂದಾದ ಕಾಂಗ್ರೆಸ್

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಉಳಿದಿದ್ದು, ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಅಳೆದೂ ತೂಗಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಬೆಳಗಾವಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಜಿಲ್ಲೆಯ 18ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮೊದಲ ಪಟ್ಟಿಯಲ್ಲಿ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು.
ಗೋಕಾಕ ಕ್ಷೇತ್ರದಲ್ಲಿ ರಮೇಶ್‌ ಜಾರಕಿಹೊಳಿ ವಿರುದ್ಧ ಹೊಸ ಮುಖವನ್ನು ಕಣಕ್ಕಿಳಿಸಿರುವುದು ಕುತೂಹಲ ಮೂಡಿಸಿದೆ. ಇಲ್ಲಿ ಡಾ ಮಹಾಂತೇಶ್‌ ಕಡಾಡಿ ಅವರನ್ನು ಕಣಕ್ಕಿಳಿಸಲಾಗಿದೆ. ಕಾಂಗ್ರೆಸ್‌ ಟಿಕೆಟ್‌ ಪಡೆಯುವ ನಿರೀಕ್ಷೆಯಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದ ಅಶೋಕ್‌ ಪೂಜಾರಿ ಅವರಿಗೆ ತೀವ್ರ ನಿರಾಸೆ ಉಂಟಾಗಿದ್ದು ಮುಂದೆ ಯಾವ ಹೆಜ್ಜೆ ಇಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ ಮಹಾಂತೇಶ್‌ ಕಡಾಡಿ ಅವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಮಹಾಂತೇಶ್‌ ಅವರು ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಪ್ರಯೋಗ ಫಲಿತಾಂಶ ನೀಡಲಿದೆಯೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.
ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಖಚಿತ ಎಂದು ಭಾವಿಸಿದ್ದ ಅಶೋಕ ಪೂಜಾರಿ ಈಗಾಗಲೇ ಪ್ರಚಾರ ಕೈಗೊಂಡಿದ್ದರು. ಟಿಕೆಟ್‌ ನೀಡುತ್ತೇವೆ ಎಂದು ಪಕ್ಷಕ್ಕೆ ಸೇರಿಸಿ ಕೊಂಡಿರುವುದು ಅವರೇ ಹೇಳಿ ಕೊಂಡಿದ್ದರು.

ಜಾರಕಿಹೊಳಿಗೆ ಪೈಪೋಟಿ ನೀಡಿದ್ದ ಪೂಜಾರಿ!
ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ರಮೇಶ್‌ ಜಾರಕಿಹೊಳಿಗೆ 2008ರಿಂದಲೂ ಅಶೋಕ್‌ ಪೂಜಾರಿ ಪೈಪೋಟಿ ನೀಡುತ್ತಲೇ ಬಂದಿದ್ದಾರೆ. ಆದರೆ ಒಮ್ಮೆಯೂ ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ. 2008 ಮತ್ತು 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಶೋಕ್‌ ಪೂಜಾರಿ ರಮೇಶ್‌ ಜಾರಕಿಹೊಳಿಗೆ ಪೈಪೋಟಿ ನೀಡಿದ್ದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಶೋಕ್‌ ಪೂಜಾರಿ ಮತ್ತೆ ಗೋಕಾಕ್‌ ಸಾಹುಕಾರರಿಗೆ ತೀವ್ರ ಸ್ಪರ್ಧೆಯೊಡ್ಡಿದ್ದರು. 2019ರಲ್ಲಿ ಆಪರೇಶನ್ ಕಮಲ ಮೂಲಕ ರಮೇಶ್‌ ಜಾರಕಿಹೊಳಿ ಬಿಜೆಪಿ ಸೇರಿ ಸಚಿವರಾದ ನಂತರ ಅಶೋಕ್‌ ಪೂಜಾರಿ ಜೆಡಿಎಸ್‌ಗೆ ಮರಳಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಪಡೆಯಲೇಬೇಕು ಎಂದು ಹಠ ತೊಟ್ಟು ಕಾಂಗ್ರೆಸ್‌ಗೆ ಬಂದಿದ್ದ ಅಶೋಕ್‌ ಪೂಜಾರಿಗೆ ವರಿಷ್ಠರು ಶಾಕ್‌ ನೀಡಿದ್ದಾರೆ. ಇದೀಗ ಅಶೋಕ್‌ ಪೂಜಾರಿ ಜೆಡಿಎಸ್‌ ನತ್ತ ಮುಖ ಮಾಡುವ ಸಾಧ್ಯತೆಗಳಿವೆ ಎಂದು ಅವರ ಆಪ್ತರು ಹೇಳುತ್ತಾರೆ. ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್‌ ನೀಡಿರುವ ಕಾಂಗ್ರೆಸ್‌ ತಂತ್ರ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬ ಕುತೂಹಲ ಮೂಡಿದೆ.
ಉಳಿದಂತೆ ಸವದತ್ತಿ ಕ್ಷೇತ್ರದಿಂದ ವಿಶ್ವಾಸ ವೈದ್ಯ, ನಿಪ್ಪಾಣಿ ಕ್ಷೇತ್ರಕ್ಕೆ ಕಾಕಾಸಾಹೇಬ ಪಾಟೀಲ್‌ ಹಾಗೂ ಕಿತ್ತೂರು ಕ್ಷೇತ್ರದಿಂದ ಬಾಬಾಸಾಹೇಬ ಪಾಟೀಲ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ.