Belagavi News In Kannada | News Belgaum

ಕಾಂಗ್ರೆಸ್ ಸರ್ವರ ಸಮಾನವಾಗಿ ಕಾಣುವ ಪಕ್ಷ: ರಾಶಿಂಗೆ

ಹುಕ್ಕೇರಿ: ಜಾತ್ಯತೀತತೆ, ಸಾಮರಸ್ಯ, ಅಭಿವೃದ್ಧಿ ಪರ ಚಿಂತನೆ, ಉದಾತ್ತ ತತ್ವ ಸಿದ್ಧಾಂತವನ್ನು ಹೊಂದಿದ ಕಾಂಗ್ರೆಸ್ ಸರ್ವ ಜನಾಂಗದವರನ್ನು ಸಮಾನವಾಗಿ ಕಾಣುವ ಪಕ್ಷವಾಗಿದೆ. ಆದ್ದರಿಂದಲೇ ಕಾಂಗ್ರೆಸ್ ಸರ್ವ ಜನಾಂಗ ಸುಂದರ ತೋಟವಾಗಿದೆ ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ ಹೇಳಿದರು.
ತಾಲೂಕಿನ ಬೆಳವಿಯಲ್ಲಿ  ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅನುಷ್ಠಾನಗೊಳಿಸಿದ ಯೋಜನೆಗಳೇ ಜನರ ಬಾಳಿಗೆ ಬೆಳಕಾಗಿವೆ. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕವನ್ನು ಸುವರ್ಣ ರಾಜ್ಯವನ್ನಾಗಿ ಮಾಡಿದ್ದರು. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ ಸೇರಿದಂತೆ ಅನೇಕ ಜನೋಪಕಾರಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನಮನ ಗೆದ್ದಿದ್ದಾರೆ ಎಂದು ಅವರು ಹೇಳಿದರು.
ಅಭ್ಯರ್ಥಿ ಎ.ಬಿ.ಪಾಟೀಲ ಮಾತನಾಡಿ, ರಾಜ್ಯದ ಜನತೆ ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಕಾರ್ಯವನ್ನು ನೋಡಿದ್ದಾರೆ. ಸದ್ಯ ರಾಜ್ಯದಲ್ಲಿನ ಬಿಜೆಪಿ ದುರಾಡಳಿತವನ್ನು ನೋಡಿದ್ದಾರೆ. ಬಿಜೆಪಿ ಜನವಿರೋಧಿ ನೀತಿಗೆ ಬೇಸತ್ತ ಜನರು ಕಾಂಗ್ರೆಸ್ ಬೆಂಬಲಿಸುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ, ಪುರಸಭೆ ಸದಸ್ಯೆ ರೇಖಾ ಚಿಕ್ಕೋಡಿ, ಮುಖಂಡರಾದ ರಾಜು ಸಿದ್ನಾಳ, ದಿಲೀಪ ಹೊಸಮನಿ, ಶಾನೂರ್ ತಹಶೀಲ್ದಾರ, ಮಂಜು ಪಡದಾರ, ಕುಮಾರ ಬೆಂಕಿ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಶಿರಹಟ್ಟಿ ಬಿ.ಕೆ., ಸಾರಾಪುರ, ಶೇಲಾಪುರ ಸೇರಿದಂತೆ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಕಾಂಗ್ರೆಸ್ ಮುಖಂಡರು ಅಬ್ಬರದ ಪ್ರಚಾರ ನಡೆಸಿ ಮತಯಾಚಿಸಿದರು.////