ಯಮಕನಮರಡಿ ಕ್ಷೇತ್ರದಲ್ಲಿ ಸಾಹುಕಾರ್ ಹಾದಿ ಸುಗಮ
ಕ್ಷೇತ್ರದ ಮೇಲಿದೆ ಅಹಿಂದ ನಾಯಕ ಸತೀಶ್ ಜಾರಕಿಹೊಳಿ ಹಿಡಿತ-ಯಮಕನಮರಡಿ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡ ಮತಗಳೇ ನಿರ್ಣಾಯಕ

ಪರಿಶಿಷ್ಟ ಪಂಗಡ ಮತಗಳೇ ನಿರ್ಣಾಯಕ
ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರಾಬಲ್ಯದ ನಡುವೆ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಹಾಗೂ ಅವರ ನಾಯಕರ ರಾಜಕೀಯ ತಂತ್ರಗಾರಿಕೆ ಫಲ ಕೊಟ್ಟೀತೇ ಎಂಬ ಪ್ರಶ್ನೆಗಳು ಈಗ ಯಮಕನಮರಡಿ ಕ್ಷೇತ್ರದ ಮತದಾರರನ್ನು ಕಾಡುತ್ತಿದೆ.
ಹೌದು…ಕಾಂಗ್ರೆಸ್‌ದ್ದಷ್ಟು ಹುಮ್ಮಸ್ಸು, ಪ್ರಚಾರದ ಭರಾಟೆ ಬಿಜೆಪಿ ಪಾಳೆಯದಲ್ಲಿ ಕಾಣುತ್ತಿಲ್ಲ. ಯಮಕನಮರಡಿ ಕ್ಷೇತ್ರ ಕಬ್ಬಿಣದ ಕಡಲೆ ಎಂದು ಭಾವಿಸಿದಂತೆ ಕಾಣುತ್ತಿರುವ ಬಿಜೆಪಿ ಇಲ್ಲಿ ಅಷ್ಟೊಂದು ತುರುಸಿನ ಪ್ರಚಾರ ಮಾಡುತ್ತಿಲ್ಲ. ಅಭ್ಯರ್ಥಿ ಬಸವರಾಜ ಹುಂದ್ರಿ ಸೇರಿ ಜಿಲ್ಲೆಯ ನಾಯಕರು ಆಸಕ್ತಿಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವಂತೆ ಕಂಡಿಲ್ಲ. ಆದರೆ ಅಹಿಂದ ನಾಯಕರಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪರ್ಧಿಸುವ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಂಡಿರುವುದರಿಂದ ಬಿಜೆಪಿ ಪಕ್ಷದ ನಾಯಕರ ಗಮನ ಈ ಕ್ಷೇತ್ರದ ಮೇಲೆ ಕೇಂದ್ರೀಕೃತವಾಗಿದೆ. ಯಮಕನಮರಡಿ ಕ್ಷೇತ್ರದಲ್ಲಿ 1.90.339 ಮತದಾರಿದ್ದು, 109 ಹಳ್ಳಿಗಳ ವ್ಯಾಪ್ತಿ ಹೊಂದಿದೆ. ಸದ್ಯ ಯಮಕನಮರಡಿ ಕ್ಷೇತ್ರದಲ್ಲಿ ರಾಜಕೀಯ ಕಾಳಗ ನಡೆದಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹುಂದ್ರಿ ಕಣಕ್ಕಿಳಿದಿರವದರಿಂದ ಜಾರಕಿಹೊಳಿ ಸಾಹುಕಾರ್ ಹಾದಿ ಸುಗಮವಾಗಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಎಲ್ಲಡೆ ಕೇಳಿ ಬರುತ್ತಿವೆ.
ಸಾಹುಕಾರ್ ನಿರಾಳ: ಕಳೆದ ಬಾರಿ ತೀವ್ರ ಪೈಪೋಟಿ ಇದ್ದರೂ ಪ್ರಚಾರ ಮಾಡದೆ ನಿರಾಯಾಸವಾಗಿ ಜಯಗಳಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಈ ಬಾರಿ ಸಾಕಷ್ಟು ನಿರಾಳರಾಗಿರುವಂತೆ ಕಾಣುತ್ತಿದೆ. ಕಾರಣ ಬಿಜೆಪಿನಲ್ಲಿ ಚುನಾವಣೆ ಬಗ್ಗೆ ಅಂತಹ ಗಂಭೀರತೆ ಕಾಣದೇ ಇರುವುದು ಕಾಂಗ್ರೆಸ್‌ಗೆ ಅನುಕೂಲವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನೊಂದು ಕಡೆ ಯಮಕನಮರಡಿ ಕ್ಷೇತ್ರದಲ್ಲಿ ಒಟ್ಟು 1.90.339 ಮತದಾರರು ಪೈಕಿ ಪರಿಶಿಷ್ಟ ಪಂಗಡದವರು 57.546, ಪರಿಶಿಷ್ಟ ಜಾತಿಯವರು 15.250, ಲಿಂಗಾಯತರು 17.601, ಕುರುಬರು 5.550, ಮುಸ್ಲಿಮರು 9.485, ಮರಾಠರು 14. 624, ಬ್ರಾಹ್ಮನರು 4.450 ಮತದಾರರಿದ್ದು, ಅದರಲ್ಲಿ ಪರಿಶಿಷ್ಟ ಪಂಗಡ ಮತಗಳೇ ನಿರ್ಣಾಯಕರಾಗಿದ್ದಾರೆ.
ಯಮಕನಮರಡಿ ಕ್ಷೇತ್ರದ ರಾಜಕೀಯ ಚರಿತ್ರೆ: ಯಮಕನಮರಡಿ ಕ್ಷೇತ್ರವು 2008ರಲ್ಲಿ ರೂಪುಗೊಂಡಿತು. ಇದು ಮೀಸಲಾತಿ ಕ್ಷೇತ್ರವಾಗಿದೆ. ನಾಯಕ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಅವರೇ 2008 ರಿಂದ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಿದ್ದರೂ, ಜಾರಕಿಹೊಳಿ ಕುಟುಂಬದ ಹಿಡಿತವಿದೆ. ಹುಕ್ಕೇರಿಯ ಕತ್ತಿ ಕುಟುಂಬ ಹಾಗೂ ಜಾರಕಿಹೊಳಿ ಕುಟುಂಬದ ಪ್ರತಿಷ್ಠೆಯ ಕದನಕ್ಕೆ ಈ ಕ್ಷೇತ್ರ ಸಾಕ್ಷಿಯಾಗಿದೆ. ಆದರೂ, ಸತೀಶ್ ಜಾರಕಿಜೊಳಿ ವಿರುದ್ಧ ಬಿಜೆಪಿಗೆ ಒಂದು ಬಾರಿಯೂ ಗೆಲುವು ಸಾಧಿಸುವುದಕ್ಕೆ ಸಾಧ್ಯವಾಗಿಲ್ಲ. ಅಹಿಂದ ನಾಯಕರಾಗಿರುವ ಸತೀಶ್ ಜಾರಕಿಹೊಳಿ ಈ ಕ್ಷೇತ್ರದ ಮೇಲೆ ಸಂಪೂರ್ಣ ಹಿಡಿತ ಹೊಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಕ್ಷೇತ್ರದಲ್ಲಿ ಕಡಿಮೆಯಾಗದ ಜಾರಕಿಹೊಳಿ ವರ್ಚಸ್ಸು: ಬೆಳಗಾವಿ 18 ವಿಧಾನಸಭೆ ಕ್ಷೇತ್ರ ಹಾಗೂ ರಾಜ್ಯ ಅನೇಕ ಕಡೆಯಲ್ಲಿ ಓಡಾಟ ನಡೆಸಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಮಾಡುತ್ತಿರೋ ಸತೀಶ್ ಜಾರಕಿಹೊಳಿ ಅವರು ಕ್ಷೇತ್ರದ ಮತದಾರ ಆಕರ್ಷಿಸಿ ಮತ ಸೆಳೆಯುವ ಚಾಣಾಕ್ಷತನ ಸಿದ್ಧಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಕೆ ಮಾಡಿ, ಕ್ಷೇತ್ರದಲ್ಲಿ ಪ್ರಚಾರ ನಡೆಸದೇ 2800 ಮತಗಳ ಅಂತರದಿಂದ ಗೆಲ್ಲುವ ಮೂಲಕ ಜಾರಕಿಹೊಳಿ ಇತಿಹಾಸ ಸೃಷ್ಟಿ ಮಾಡಿದ್ದರು. ಯಮಕನಮರಡಿ ಕ್ಷೇತ್ರದಿಂದ ಸತತ ಮೂರು ಸಲ ಸಹ ಸತೀಶ ಜಾರಕಿಹೊಳಿ ಗೆಲುವು ಸಾಧಿಸಿ ಸದ್ಯ ೪ನೇ ಬಾರಿ ಅದೃಷ್ಟದ ಪರೀಕ್ಷೆಗೆ ಮುಂದಾಗಿದ್ದಾರೆ.
ಸತೀಶ್ ಕಾಂಗ್ರೆಸ್‌ನ ಪ್ರಭಾವಿ ನಾಯಕ: ಪ್ರಸ್ತುತ ಯಮನಕನಮರಡಿ ಕ್ಷೇತ್ರದ ಶಾಸಕರಾಗಿರುವ ಸತೀಶ್ ಜಾರಕಿಹೊಳಿ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದಾರೆ. ಅವರು ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತರೂ ಹೌದು. ಅಹಿಂದ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. 22 ಡಿಸೆಂಬರ್ 2018 ರಿಂದ 23 ಜುಲೈ 2019 ರವರೆಗೆ ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಪರಿಸರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಧರಂಸಿಂಗ್ ಸಂಪುಟದಲ್ಲಿ ಜವಳಿ ಖಾತೆ ಸಚಿವರಾಗಿದ್ದರು. 2008 ರಿಂದ ಯಮಕನಮರಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು ಎಚ್‌ಡಿ ಕುಮಾರಸ್ವಾಮಿ ಸಂಪುಟದಲ್ಲಿ ಅರಣ್ಯ ಮತ್ತು ಪರಿಸರ ಸಚಿವರಾಗಿದ್ದರು. ನಂತರ ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದರು. 2021 ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕರಾಗಿದ್ದಾರೆ.
ಬಿಜೆಪಿ ಹುಂದ್ರಿ ಹಾದಿ ದುರ್ಗಮ: ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಅಖಾಡಕ್ಕೆ ಇಳಿದಿರುವ ಬಸವರಾಜ ಹುಂದ್ರಿ ಅವರು ಚುನಾವಣ ರಾಜಕೀಯ ಪಟ್ಟುಗಳನ್ನು ಇನ್ನೂ ಕಲಿಯಬೇಕಿದೆ. ಇಲ್ಲಿನ ಹೊಂದಾಣಿಕೆ ರಾಜಕಾರಣ ಹಾಗೂ ಮತದಾರರನ್ನು ಸೆಳೆಯುವ ತಂತ್ರಗಾರಿಕೆ ಇನ್ನೂ ಕರಗತವಾಗಿಲ್ಲ. ಹೀಗಾಗಿ ಗೆಲುವಿನ ಹಾದಿ ದುರ್ಗಮವಾಗಿರುವಂತೆ ಕಾಣುತ್ತಿದೆ. ಒಂದು ವೇಳೆ ಈ ಹಾದಿಯನ್ನು ಬಸವರಾಜ ಹುಂದ್ರಿ ಸುಗಮವಾಗಿ ದಾಟಿ ಜಯದ ನಗೆ ಬೀರಿದರೆ ಅದೊಂದು ಪವಾಡವೇ ಸರಿ.
ಮುಖ್ಯವಾಗಿ ಬಿಜೆಪಿ ಪಾಳಯದಲ್ಲಿ ಆತ್ಮವಿಶ್ವಾಸದ ಹಾಗೂ ಎಲ್ಲರೂ ಒಂದಾಗಿ ಹೋಗುವ ಕೊರತೆ ಎದ್ದು ಕಂಡಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಅಸಮಾಧಾನವೋ ಏನೋ ಯಮಕನಮರಡಿ ಕ್ಷೇತ್ರಕ್ಕೆ ಮೊದಲ ಬಾರಿಗೆ ಸ್ಪರ್ಧಿಸಿರುವ ಹುಂದ್ರಿ ಕ್ಷೇತ್ರದ ನಾಯಕರಾಗಿ ಗುರುತಿಸಿಕೊಂಡಿಲ್ಲ. ಮೇಲಾಗಿ ಹುಂದ್ರಿ ಅವರಿಗೆ ಯಮಕನಮರಡಿ ಕೇತ್ರದ ಬೇಡಿಕೆಗಳು ಹಾಗೂ ಸಮಸ್ಯೆಗಳ ಬಗ್ಗೆ ಅಷ್ಟಾಗಿ ಪರಿಚಯವಿಲ್ಲ. ಇನ್ನೊಂದೆಡೆ ಕಳೆದ ಬಾರಿ ಜಾರಕಿಹೊಳಿ ವಿರುದ್ಧ 2800 ಮತಗಳಿಂದ ಸೋತಿದ್ದ ಬಿಜೆಪಿಯ ಮಾರುತಿ ಅಷ್ಟಗಿಗೆ ಕೌಶಲ್ಯಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕುಂದ್ರಿ ಅವರಿಗೆ ಮಣೆ ಹಾಕಲಾಗಿದೆ.
ಟಿಕೆಟ್ ತಪ್ಪಿದಕೆ ಕಣ್ಣೀರಿಟ್ಟ ಅಷ್ಟಗಿ: ಬೆಳಗಾವಿ ಯಮಕನಮರಡಿ ಕ್ಷೇತ್ರಕ್ಕೆ ಬಿಜೆಪಿಯಿಂದ ಎರಡು ಬಾರಿ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋತು ಈ ಬಾರಿ ಶತಾಯ ಗತಾಯ ಪ್ರಯತ್ನ ಮಾಡಿ ಗೆಲ್ಲಲೇ ಬೇಕು ಎಂದು ಹಗಲು ರಾತ್ರಿ ಸಂಘಟನೆ ಮಾಡಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಬಿಜೆಪಿ ಮುಖಂಡ ಮಾರುತಿ ಅಷ್ಟಗಿ ಅವರಿಗೆ ಟಿಕೆಟ್ ತಪ್ಪಿದಕ್ಕಾಗಿ ಕಣ್ಣಿರಿಟ್ಟಿದಾರೆ. ಆದರೆ ಇದರ ಬಗ್ಗೆ, ಯಾವುದೇ ಪ್ರತಿಕ್ರಿಯೆ ನೀಡಿದ ಅವರು ತಮ್ಮ ಮುಂದಿನ ನಿರ್ಧಾರವನ್ನು ಕಾರ್ಯಕರ್ತರ ಮೇಲೆ ಹಾಕಿ ಇಂದು ಸಾಯಂಕಾಲ ಯಮಕನಮರಡಿಯಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದಾರೆ, ಅವರ ಅಣತಿತೆಯಂತೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಒಟ್ಟಾರೆ ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ಬಣವಾಗಿ ಮಾರ್ಪಟ್ಟಿದ್ದು, ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನೆ ಸ್ವೀಕರಿಸಲಿದ್ದಾರೆ ಎಂಬ ಗುಸು ಗುಸು ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.