ನಾನೇನಾದ್ರೂ ರೇಪ್ ಮಾಡಿದ್ನಾ: ಟಿಕೆಟ್ ಕೈತಪ್ಪಿದ್ದಕ್ಕೆ ಸವದಿ ಬೇಸರ

ಬೆಳಗಾವಿ: ನನ್ನನ್ನು ಯಾಕೆ ಡಿಸಿಎಂ ಸ್ಥಾನದಿಂದ ತೆಗದ್ರಿ? ಏನ್ ತಪ್ಪು ಮಾಡಿದ್ದೆ, ಯಾರನ್ನಾದರೂ ರೇಪ್ ಮಾಡಿದ್ನಾ? ಯಾವ ಅಪರಾಧದ ಮೇಲೆ ತೆಗೆದು ಹಾಕಿದ್ರಿ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಅಸಮಾಧಾನ ವ್ಯಕ್ತಪಡಿಸಿದರು.
ಸೋತರು ಪಕ್ಷ ಡಿಸಿಎಂ ಮಾಡಿದ್ರು ಪಕ್ಷ ಬಿಡ್ತಿದ್ದಾರೆ ಎಂದು ಬಿಜೆಪಿ ನಾಯಕರ ಮಾತಿಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಡಿಸಿಎಂ ಸ್ಥಾನ ಕೊಡಬೇಕೆಂದು ನಾನು ಕೇಳಿದ್ನಾ? ನನಗೆ ಕೊಟ್ಟ ಮೇಲೆ ಕೆಲಸ ಮಾಡಿದೆ ಎಂದ ಅವರು, ಮೊದಲು ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬಿಜೆಪಿ ಬಿಡುವ ನನ್ನ ನಿರ್ಧಾರ ಅಚಲ. ಅದನ್ನು ಪ್ರಕಟ ಮಾಡುವ ಪೂರ್ವದಲ್ಲಿ ಏನು ಹೇಳಲ್ಲ. ಪಕ್ಷದಿಂದ ಹೊರಗೆ ಬಂದು ತೀರ್ಮಾನ ಮಾಡುವೆ. ಅಥಣಿ ಹೈಕಮಾಂಡ್ ತೀರ್ಮಾನ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಸಿಎಂ ಬೊಮ್ಮಾಯಿ ಅವರಿಂದ ಟಿಕೆಟ್ ಕೈತಪ್ಪಿತ್ತಾ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬೊಮ್ಮಾಯಿ ಅವರು ಹಳೆ ಸ್ನೇಹಿತರು. ಅವರೊಂದು ಪಕ್ಷ, ನಾನೊಂದು ಪಕ್ಷದಲ್ಲಿ ಇದ್ದೆವು. ಅವರ ವಿಚಾರಧಾರೆ ಬೇರೆ ನನ್ನ ವಿಚಾರಧಾರೆ ಬೇರೆ ಆಗಿತ್ತು. ಆನಂತರ ಒಂದೇ ಪಕ್ಷದಲ್ಲಿ ಒಟ್ಟಾಗಿ, ನಾನು ಅವರು ಸಚಿವರಾಗಿ ಕೂಡಿ ಕೆಲಸ ಮಾಡಿದ್ದೇವೆ. ಅನೇಕ ಮುಖಂಡರು ನನ್ನ ನಿರ್ಲಕ್ಷ್ಯ ಮಾಡಿದ್ದಕ್ಕೆ ಬೇಸರವಾಗಿದೆ ಎಂದು ಹೇಳಿದರು.
ಟಿಕೆಟ್ ತಪ್ಪಿದ್ದಕ್ಕೆ ಪಕ್ಷ ಬಿಡ್ತಿದ್ದಾರೆ ಅಂತಾ ಮೇಲ್ನೋಟಕ್ಕೆ ಕಾರಣ ಅನಿಸುತ್ತದೆ. ಆದರೆ ನನಗಾಗಿರೋ ನೋವು, ಹಿಂಸೆ ಬಹಳಷ್ಟು ಇದೆ. ಆಂತರಿಕ ಹಿಂಸೆಗಳು ಜಿಲ್ಲೆ, ರಾಜ್ಯದಲ್ಲಿ ಅನುಭವಿಸಿರುವೆ. ನನ್ನ ಪಕ್ಷ ತಾಯಿ ಅಂತಾ ತಿಳಿದು ಸುಮ್ಮನಿದ್ದೆ. ರಾಷ್ಟ್ರೀಯ ನಾಯಕರು ಬಂದಾಗ ವೇದಿಕೆ ಹಂಚಿಕೊಳ್ಳಲು ಆಗಿಲ್ಲ. ನನ್ನ ನೋವು ತಡೆದುಕೊಂಡು ಬಂದಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು.
ಡಿಸಿಎಂ ಸ್ಥಾನದಿಂದ ಯಾವುದೇ ಸೂಚನೆ ಇಲ್ಲದೇ ತೆಗೆದರು. ನಾನು ವಿರೋಧ ಮಾಡಿಲ್ಲ. ನಾನು ಎಂದು ಪಕ್ಷ ವಿರೋಧಿ, ಟೀಕೆ ಟಿಪ್ಪಣಿ ನಾನು ಮಾಡಿಲ್ಲ. ನನಗೆ ಯಾರ ಮೇಲೂ ದ್ವೇಷ, ಅಸೂಯೆ ಇಲ್ಲ. ಇನ್ನೊಬ್ಬರಿಗೆ ನಾನು ಮನಸು ನೋವು ಮಾಡಲ್ಲ. ಅವರಿಗೆ ಕೆಡಕು ಬಯಸುವುದಿಲ್ಲ ಎಂದರು.//////