ಹುಕ್ಕೇರಿ ಕ್ಷೇತ್ರದಲ್ಲಿ ಕತ್ತಿ ಕುಟುಂಬ ರಾಜಕಾರಣ ಅಂತ್ಯ: ಮಲ್ಲಿಕಾರ್ಜುನ ರಾಶಿಂಗೆ

ಹುಕ್ಕೇರಿ: ಈ ಸಲದ ಚುನಾವಣೆಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು ಹುಕ್ಕೇರಿ ಕ್ಷೇತ್ರದ ಜನತೆ ಕತ್ತಿ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನತೆ ಸುಮಾರು ಮೂರು ದಶಕಗಳಿಂದ ಕತ್ತಿ ಕುಟುಂಬ ನಡೆಸುವ ದಬ್ಬಾಳಿಕೆ, ಸರ್ವಾಧಿಕಾರ ಮತ್ತು ಕಿರುಕುಳಕ್ಕೆ ಬೇಸತ್ತು ಈ ಸಲ ಶಾಸಕರನ್ನು ಬದಲಾಯಿಸಲು ತೀರ್ಮಾನಿಸಿದ್ದಾರೆ ಎಂದರು.
ಕ್ಷೇತ್ರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಪ್ರಾತಿನಿಧಿಕ ಸಂಸ್ಥೆ ಮತ್ತು ಸಂವಿಧಾನಬದ್ಧ ಹಕ್ಕು ಇರದ ಕತ್ತಿ ಕುಟುಂಬದ ಸದಸ್ಯರು ಹಸ್ತಕ್ಷೇಪ ಮಾಡಿ ಅಧಿಕಾರ ಚಲಾಯಿಸುತ್ತಾರೆ. ಅಧಿಕಾರಿಗಳ ಸ್ವಜನಪಕ್ಷಪಾತದಿಂದ ಇಲ್ಲಿ ಅಧಿಕಾರ ದುರುಪಯೋಗವಾಗುತ್ತಿದೆ. ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ, ವಿವಿಧ ಸಂಘ-ಸಂಸ್ಥೆಗಳಲ್ಲಿ ಹೆಸರಿಗೆ ಮಾತ್ರ ಆಡಳಿತ ಮಂಡಳಿಗಳಿದ್ದು ಅಧಿಕಾರ ಚಲಾವಣೆ ಕತ್ತಿ ಕುಟುಂಬ ನಿರ್ವಹಿಸಿ ಕೋಟ್ಯಂತರ ರೂ,ಗಳನ್ನು ಲೂಟಿ ಮಾಡಿದೆ ಎಂದು ಅವರು ಆರೋಪಿಸಿದರು.
ಬಿಜೆಪಿಯಲ್ಲಿ ಎರಡನೇ ಹಂತದ ನಾಯಕರನ್ನು ಬೆಳೆಯಲು ಬಿಟ್ಟಿಲ್ಲ. ಕಿರುಕುಳಕ್ಕೆ ಬೇಸತ್ತು ಮಾಜಿ ಸಚಿವ ಶಶಿಕಾಂತ ನಾಯಿಕ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ತ್ಯಜಿಸುವಂತಾಯಿತು. ಸುಮಾರು 30ಕ್ಕೂ ಹೆಚ್ಚು ವರ್ಷದಿಂದ ಕ್ಷೇತ್ರ ಪ್ರತಿನಿಧಿಸುತ್ತಿದ್ದರೂ ಸಂಪೂರ್ಣ ನೀರಾವರಿ ಮಾಡಲಾಗಿಲ್ಲ. ಅಭಿವೃದ್ಧಿಯಲ್ಲಿ ಕ್ಷೇತ್ರ ಸಾಕಷ್ಟು ಹಿಂದಿದೆ ಎಂದು ಅವರು ಆರೋಪಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಬಿಎಸ್‍ಎನ್‍ಎಲ್ ಮತ್ತು ರೈಲ್ವೆ ಇಲಾಖೆ ಖಾಸಗೀಕರಣ, ನಿರುದ್ಯೋಗ ಹೆಚ್ಚಳ, ಕೆಎಂಎಫ್ ನಂದಿನಿ ಸಂಸ್ಥೆ ಮುಚ್ಚುವ ಹುನ್ನಾರ ನಡೆದಿದೆ ಎಂದು ಅವರು ದೂರಿದರು.
ಕಾಂಗ್ರೆಸ್ ಅಭ್ಯರ್ಥಿಯೂ ಆದ ಮಾಜಿ ಸಚಿವ ಎ.ಬಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗುಡಸ, ಹಟ್ಟಿಆಲೂರ, ಅವರಗೋಳ, ಹೊಸೂರ, ಹುಕ್ಕೇರಿ, ಯರಗಟ್ಟಿ ಸೇರಿದಂತೆ ಮತ್ತಿತರ ಗ್ರಾಮಗಳ ಬಿಜೆಪಿ, ಜೆಡಿಎಸ್‍ನ ನೂರಾರು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿ ಎ.ಬಿ.ಪಾಟೀಲಗೆ ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಬ್ಲಾಕ್ ಅಧ್ಯಕ್ಷರಾದ ವಿಜಯ ರವದಿ, ಸಂತೋಷ ಮುಡಸಿ, ಪುರಸಭೆ ಸದಸ್ಯರಾದ ಜೀತು ಮರಡಿ, ರೇಖಾ ಚಿಕ್ಕೋಡಿ, ಮುಖಂಡರಾದ ಕರುಣಾಕರ ಶೆಟ್ಟಿ, ಮೌನೇಶ ಪೋತದಾರ, ರಿಷಭ್ ಪಾಟೀಲ, ದಿಲೀಪ ಹೊಸಮನಿ, ಕೆಂಪಣ್ಣಾ ಶಿರಹಟ್ಟಿ, ಲಕ್ಷ್ಮಣ ಹೂಲಿ, ರಾಜು ಬಂಗಾರಿ, ಮಂಜು ಪಡದಾರ, ರಾಜು ಸಿದ್ನಾಳ, ಪ್ರಕಾಶ ಮೈಲಾಖೆ, ಶಾನೂರ್ ತಹಶೀಲ್ದಾರ ಮತ್ತಿತರರು ಉಪಸ್ಥಿತರಿದ್ದರು.//////