Belagavi News In Kannada | News Belgaum

ವಾಕರಸಾ ಸಂಸ್ಥೆಯ ಇಬ್ಬರು ಚಾಲಕರಿಗೆ “ಹೀರೊಸ್ ಆನ್ ದ ರೋಡ್” ರಾಷ್ಟ್ರ ಮಟ್ಟದ ಪ್ರಶಸ್ತಿ

ಬೆಳಗಾವಿ : ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಸುರಕ್ಷತೆಯನ್ನು ಉತ್ತೇಜಿಸುವ ಸಲುವಾಗಿ ಅಪಘಾತ ರಹಿತ ಸುರಕ್ಷತಾ ಬಸ್ ಚಾಲನೆಗಾಗಿ ರಾಷ್ಟ್ರ ಮಟ್ಟದಲ್ಲಿ ಕೊಡ ಮಾಡುವ “ಹೀರೊಸ್ ಆನ್ ದ ರೋಡ್” ಪ್ರಶಸ್ತಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಇಬ್ಬರು ಚಾಲಕರು ಭಾಜನರಾಗಿದ್ದಾರೆ.

ಚಿಕ್ಕೋಡಿ ವಿಭಾಗದ ಅಥಣಿ ಘಟಕದ ಕೇದಾರಿ ತಮ್ಮಣ್ಣ ಬಕಾರಿ ಮತ್ತು ಬೆಳಗಾವಿ ವಿಭಾಗದ ಬೆಳಗಾವಿ-2ನೇ ಘಟಕದ ಸುರೇಶ ಎನ್. ಭಾವಿಕಟ್ಟಿ ಪ್ರಶಸ್ತಿಗೆ ಆಯ್ಕೆಯಾಗಿರುವ ಚಾಲಕರು.
ದೇಶದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಸುರಕ್ಷಿತ ಬಸ್ ಚಾಲನೆಯನ್ನು ಉತ್ತೇಜಿಸಲು ಅಸೋಷಿಯೇಷನ್ ಆಫ್ ಸ್ಟೇಟ್ ರೋಡ್ ಟ್ರಾನ್ಸ್ ಪೆÇೀರ್ಟ್ ಅಂಡರ್ ಟೇಕಿಂಗ್ (ಎ.ಎಸ್.ಆರ್.ಟಿ.ಯು.) ಸಂಸ್ಥೆಯ ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ವಿವಿಧ ರಾಜ್ಯಗಳ ಸಾರಿಗೆ ಸಂಸ್ಥೆಗಳಲ್ಲಿ ಸೇವಾವಧಿಯಲ್ಲಿ ದೂರು, ಅಪರಾಧಗಳಿಲ್ಲದ ಅಪಘಾತ ರಹಿತ ಚಾಲಕರುಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಚಾಲಕರನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಭರತ್. ಎಸ್ ಅಭಿನಂದಿಸಿದ್ದಾರೆ. ದಿನದಿಂದ ದಿನಕ್ಕೆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ನಿರಂತರ ಸುರಕ್ಷಿತ ಬಸ್ ಚಾಲನೆ ಸವಾಲಿನ ಕೆಲಸ. ಪ್ರಶಸ್ತಿಗೆ ಆಯ್ಕೆಯಾಗಿರುವ ಚಾಲಕರುಗಳು ತಮ್ಮ ಧೀರ್ಘ ಸೇವಾವಧಿಯಲ್ಲಿ ಅಪಘಾತ ರಹಿತ ಚಾಲನೆ ಮಾಡಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು.
ಏ. 18 ರಂದು ನವದೆಹಲಿಯಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯದ ಸಚಿವರು ಮತ್ತಿತರ ಗಣ್ಯರು ಚಾಲಕರಿಗೆ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ ಎಂದು ವಾಕರಸಾ.ಸಂಸ್ಥೆ, ಉಪ ಮುಖ್ಯ ಸಂಚಾರ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಅವರು ತಿಳಿಸಿದ್ದಾರೆ.//////