Belagavi News In Kannada | News Belgaum

ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಬಿ ಫಾರಂ ಪಡೆದ ಜಗದೀಶ್ ಶೆಟ್ಟರ್

ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಬಿ ಫಾರ್ಮ್ ಪಡೆದುಕೊಂಡು ನಾಮಪತ್ರ ಸಲ್ಲಿಕೆಗೆ ಹುಬ್ಬಳ್ಳಿ ಕಡೆಗೆ ಹೊರಟಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಗದೀಶ್ ಶೆಟ್ಟರ್ ಸ್ಪರ್ಧಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಜಗದೀಶ್ ಶೆಟ್ಟರ್ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದೇನೆ‌. ಒಬ್ಬ ಮಾಜಿ ಸಿಎಂ, ಎರಡು ಬಾರಿ ಪ್ರತಿ ಪಕ್ಷ ನಾಯಕ, ಒಂದು ಪಕ್ಷದ ಅಧ್ಯಕ್ಷನಾಗಿದ್ದವನು ಪಕ್ಷಾಂತರ ಮಾಡುತ್ತಿರುವುದು ಬಹಳ‌ ಜನರಿಗೆ ಆಶ್ಚರ್ಯವಾಗಿರಬಹುದು. ನನಗೆ ವೇದನೆಯಾಗಿದೆ ಎಂದು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ. ಎಲ್ಲರ ಅಭಿಪ್ರಾಯ ಪಡೆದು ಕಾಂಗ್ರೆಸ್‌ ನಾಯಕರು ಕರೆ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದರು. ನನಗೆ ಬೇರೆ ದಾರಿ ಇಲ್ಲ. ನಾನು ಕಟ್ಟಿ ಬೆಳೆಸಿದ ಮನೆಯಿಂದ ಹೊರಗೆ ಕಳಿಸಿದರು. ಕಾಂಗ್ರೆಸ್ ತತ್ವ ಸಿದ್ಧಾಂತ ನಂಬಿ ಸೇರ್ಪಡೆಯಾಗುತ್ತಿದ್ದೇನೆ‌ ಎಂದು ಜಗದೀಶ್ ಶೆಟ್ಟರ್ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್‌‌ ಪಕ್ಷದ ನೀತಿ, ಸಿದ್ಧಾಂತ ಜಗದೀಶ್ ಶೆಟ್ಟರ್‌ ಅವರಿಗೆ ಗೊತ್ತಿದೆ. ಶೆಟ್ಟರ್ ಯಾವ ಸಿದ್ಧಾಂತದಲ್ಲಿ‌ ಕೆಲಸ‌ಮಾಡಿಕೊಂಡು ಬಂದಿದ್ದಾರೆ ಎಂಬುದು ಗೊತ್ತಿದೆ. ಈಗ ನಮ್ಮ‌ ಸಿದ್ಧಾಂತ ಒಪ್ಪಿ, ತಮ್ಮ‌ ಸ್ವಾಭಿಮಾನ‌ ಕಾಪಾಡಿಕೊಳ್ಳಲು ಕಾಂಗ್ರೆಸ್‌ಗೆ ಬಂದಿದ್ದಾರೆ. ಶೆಟ್ಟರ್ ಅವರಷ್ಟೇ ಗೆಲ್ಲದೇ ಕಾಂಗ್ರೆಸ್‌ಗೆ ಸಹಾಯಕರಾಗುತ್ತಾರೆಂಬ ನಂಬಿಕೆ‌ ಇದೆ. ಅವರಿಂದ ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಹೆಚ್ಚಿನ‌ ಶಕ್ತಿ ಸಿಗಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರಳ ಸಜ್ಜನಿಕೆ ರಾಜಕಾರಣಿ, ಸ್ವಾಭಿಮಾನಿ, ಸಣ್ಣ ಕಪ್ಪು ಚುಕ್ಕೆ ಇಲ್ಲದೇ ರಾಜಕಾರಣ ಮಾಡಿಕೊಂಡು ಬಂದ ರಾಜಕಾರಣಿ ಜಗದೀಶ್ ಶೆಟ್ಟರ್. ಇಡೀ‌ ರಾಷ್ಟ್ರ ರಾಜಕಾರಣಕ್ಕೆ ಸಂದೇಶ ಕೊಡಲು ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.//////