ಆರೋಗ್ಯ ಕಾಳಜಿ ವಹಿಸುವುದರ ಜತೆಗೆ ತಪ್ಪದೇ ಮತದಾನ ಮಾಡಬೇಕು’: ತಾಪಂ ಇಒ ಸುಭಾಷ ಸಂಪಗಾವಿ

ಬೆಳಗಾವಿ : ಪ್ರತಿಯೊಬ್ಬರ ನೆಮ್ಮದಿಯ ಬದುಕಿಗೆ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದೃಢ ರಾಷ್ಟ್ರ ಹಾಗೂ ಸಮರ್ಥ ಸರ್ಕಾರ ರಚನೆಯಲ್ಲಿ ಮತದಾನ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರೂ ಆರೋಗ್ಯ ಕಾಳಜಿ ವಹಿಸುವುದರ ಜತೆಗೆ ತಪ್ಪದೇ ಮತದಾನ ಮಾಡಬೇಕು’ ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ, ತಾಪಂ ಇಒ ಸುಭಾಷ ಸಂಪಗಾವಿ ಹೇಳಿದರು.
ಚನ್ನಮ್ಮ ಕಿತ್ತೂರು ತಾಲೂಕಿನ ಕಲಭಾಂವಿ ಗ್ರಾಪಂ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಏ.18 ಐಇಸಿ ಚಟುವಟಿಕೆಯಡಿ ಆರೋಗ್ಯ ಶಿಬಿರ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಕೂಲಿಕಾರಿಗೆ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇಂದಿನ ಒತ್ತಡದ ಬದುಕಿನಲ್ಲಿ ಗಳಿಕೆ ಎನ್ನುವುದು ಹಣ ಮಾತ್ರವಲ್ಲ, ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ನಿಜವಾದ ಸಂಪಾದನೆ ಎಂಬಂತಾಗಿದ್ದು ದುಡಿಮೆಯ ಜತೆಗೆ ಆರೋಗ್ಯಕ್ಕೂ ಗಮನಹರಿಸಬೇಕು. ದಿನವಿಡಿ ಪರಿಶ್ರಮ ಪಡುವ ಕೂಲಿಕಾರು ಆರೋಗ್ಯಯುತವಾಗಿರಲು ತಪ್ಪದೇ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡಬೇಕು. ಅದೇ ರೀತಿ ಮತದಾನ ಪ್ರತಿಯೊಬ್ಬರು ಹಕ್ಕಾಗಿದ್ದು, ಅದನ್ನು ಹಣಕಾಸಿನ ಆಮಿಷಕ್ಕೆ ಒಳಗಾಗದೇ, ಸಂವಿಧಾನ ನೀಡಿದ ಹಕ್ಕನ್ನು ಮಾರಿಕೊಳ್ಳದೇ ವಿವೇಚನೆಯಿಂದ ಮತದಾನ ಮಾಡಬೇಕು’ ಎಂದು ಮನೋಜ್ಞವಾಗಿ ತಿಳಿಸಿದರು.
ಸಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಂತೋಷ ಗಡದವರ ಮಾತನಾಡಿ, ’ಸೇವಿಸುವ ಆಹಾರ ಹಿತಮಿತವಾಗಿ, ಕಾಲಕ್ಕೆ ಅನುಗುಣವಾಗಿದ್ದರೆ ಆಹಾರ ಪದ್ದತಿ ಮೂಲಕವೇ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು. ಅಲ್ಲದೇ, ಸರ್ಕಾರ ವಿವಿಧ ಯೋಜನೆಗಳಡಿ ಆಯೋಜಿಸುವ ಆರೋಗ್ಯ ಶಿಬಿರಗಳು ಹಾಗೂ ಆರೋಗ್ಯ ಇಲಾಖೆಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಕೂಲಿಕಾರರಿಗೆ ಮಾಹಿತಿ ನೀಡಿದರು.
ತಾಪಂ ಸಹಾಯಕ ನಿರ್ದೇಶಕರಾದ ಲಿಂಗರಾಜ ಹಲಕರ್ಣಿಮಠ, ಐಇಸಿ ಸಂಯೋಜಕಿ ಎಸ್.ಬಿ.ಜವಳಿ, ಗ್ರಾಪಂ ಕಾರ್ಯದರ್ಶಿ ರುದ್ರಪ್ಪ ಜಾಂಗಟಿ, ಮಡಿವಾಳಪ್ಪ ತಿಗಡಿ, ಪ್ರವೀಣ ಸೋಮನಟ್ಟಿ, ಮೇಘರಾಜ ಸೋಮನಟ್ಟಿ, ಕಲ್ಲಪ್ಪ ಚಕಡಿ, ರೇಣುಕಾ ತಳಾವರ, ಅನ್ನಪೂರ್ಣ ವಕ್ಕುಂದ, ಭಾಗ್ಯಲಕ್ಷ್ಮೀ ಬಿ ಎಚ್, ಮಹಾದೇವಿ ದಾಸ್ತಿಕೊಪ್ಪ, ಸಿದ್ದಾರೂಢ ತಿಗಡಿ, ವಿಠ್ಠಲ ತಳವಾರ, ದೇಮಪ್ಪ ಹೈಬತ್ತಿ ,ಸಂಗೊಳ್ಳಿ ಆರೋಗ್ಯ ಕೇಂದ್ರ ಹಾಗೂ ಕಿತ್ತೂರ ಸಮುದಾಯ ಆರೋಗ್ಯ ಕೇಂದ್ರದ ಹಾಗೂ ಗ್ರಾಪಂ ಸಿಬ್ಬಂದಿ ಪಾಲ್ಗೊಂಡಿದ್ದರು./////