Belagavi News In Kannada | News Belgaum

ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಪಕ್ಕಾ: ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ

ಬೈಲಹೊಂಗಲ: – ರಾಜ್ಯದಲ್ಲಿ ಕಾಂಗ್ರೆಸ್ ಪರ ಸುನಾಮಿ ಅಲೆ ಎದ್ದಿದ್ದು ಅಧಿಕಾರ ಚುಕ್ಕಾಣಿ ಹಿಡಿಯುವುದು ಶತ ಸಿದ್ದವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳದರು. ಅವರು ಪಟ್ಟಣದ ಎಂಎಸ್ ಎಸ್ ಅರ್ ಪ್ರೌಢಶಾಲೆ ಆವರಣದಲ್ಲಿ ಜರುಗಿದ ಬೈಲಹೊಂಗಲ ಮತಕ್ಷೇತ್ರದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಮಹಾಂತೇಶ ಕೌಜಲಗಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯದ ಜನತೆಯನ್ನು ಬದಲಾವಣೆ ಬಯಸಿದ್ದು ಬಿಜೆಪಿ ಅವರು ಕಳೆದ 4 ವರ್ಷಗಳಿಂದ ಜನರ ಆಶೀರ್ವಾದದಿಂದ ಅಧಿಕಾರ ಚುಕ್ಕಾಣಿ ಹಿಡಿದಿಲ್ಲ. ಹಿಂಬಾಗಿಲಿನಿಂದ ಅಧಿಕಾರ ಸ್ವೀಕರಿಸಿದ್ದಾರೆ.

ಬಿಜೆಪಿಯವರಿಂದಲೇ ಆಪರೇಶನ್ ಕಮಲ ಆರಂಭವಾಗಿದೆ ಎಂದು ಆಪಾಧಿಸಿದರು. 2013ರಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಪ್ರನಾಳಿಕೆಯಲ್ಲಿ 165 ಭರವಸೆ ನೀಡಿದ್ದು 158 ಭರವಸೆ ಇಡೇರಿಸಿದ್ದೇನೆ. ರಾಜ್ಯದ ಇತಿಹಾಸದಲ್ಲಿ ನುಡಿದಂತೆ ನಡೆದ ಸರಕಾರ ಕಾಂಗ್ರೆಸ್ ಸರಕಾರವಾಗಿದೆ. ಬಸವ ಜಯಂತಿಯಂದು ನಾನು ಅಧಿಕಾರ ಸ್ವೀಕರಿಸಿದ್ದು ಬಸವಾದಿಶರಣರ ನುಡಿದಂತೆ ನಡೆದಿದ್ದೇನೆ. ಅವರು ಹೇಳಿದಂತೆ ನಾನೂ ಕೂಡಾ ಪ್ರಮಾಣವಚನ ಸ್ವೀಕರಿಸಿದ್ದೇನೆ.

ಅಧಿಕಾರ ಚುಕ್ಕಾಣಿ ಹಿಡಿದ ಒಂದು ಗಂಟೆಯಲ್ಲಿ 6 ಪ್ರಮುಖ ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಅಲ್ಲದೆ ಜನಪರ ಆಡಳಿತ ನೀಡಿದ್ದೇನೆ. ಇಂದು ಬಿಜೆಪಿ ಕೂಡಾ 1 ರೂ. ಸಾಲ ಮನ್ನಾ ಮಾಡಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೊಸೈಟಿ, ಬ್ಯಾಂಕಗಳಲ್ಲಿ 1 ಲಕ್ಷ ಸಾಲ ಮನ್ನಾ ಮಾಡುತ್ತೇನೆಂದು ಹೇಳಿದವರು ಇನ್ನೂ ಮಾಡಿಲ್ಲ. 600 ಭರವಸೆಗಳಲ್ಲಿ 55 ಭರವಸೆಯನ್ನು ಇಡೇರಿಸಿದ್ದಾರೆ. ಶೇ. 10 ರಷ್ಟು ಮಾತ್ರ ಇಡೇರಿಸಿದ್ದಾರೆ. ಪ್ರಧಾನಿಯವರು ಅಚ್ಚೆ ದಿನ್ ಆಯೇಗಾ ಎಂದು ಹೇಳಿದವರು. ಇಂದು ಅಗತ್ಯ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬ್ರಮನಿರಶನಗೊಂಡಿದ್ದಾರೆ. ಮನಮೋಹನ ಸಿಂಗರ ಕಾಲದಲ್ಲಿ ರೂ. 400ಗೆ ಗ್ಯಾಸ್ ಬೆಲೆ ಇತ್ತು. ಇಂದು ಅದು 1200 ಕ್ಕೆ ಏರಿಕೆಯಾಗಿದೆ. ಇದೇ ನಿಮ್ಮ ಅಚ್ಚೆ ದಿನವಾ? ಎಂದು ಪ್ರಶ್ನಿಸಿದರು.

ಬೊಮ್ಮಾಯಿ ಮುಖ್ಯಮಂತ್ರಿಯವರಿಂದ ಬೀದಿ ಗಲ್ಲಿಗಳಲ್ಲಿ , ಕಚೇರಿಗಳಲ್ಲಿ ಶೇ. 40 ರಷ್ಟು ಸರಕಾರ ಎಂದು ಮಾತನಾಡುವಂತಾಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಪ್ರಧಾನಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಇವರ ಸರಕಾರ ಅಲಿಬಾಬಾ ಚಾಲಿಸ್ ಚೊರ ಎಂಬಂತಾಗಿದೆ. ಇಂಥ ಸರಕಾರ ಬೇಕಾ? ಎಂದು ಪ್ರಶ್ನಿಸಿದರು. ರೈತರಿಗೆ ನ್ಯಾಯಯುತ ಬೆಲೆ ಕೊಡಲಿಕ್ಕಾಗಲಿಲ್ಲ. ಪ್ರವಾಹ, ಕರೋನಾ ಸಂದರ್ಭದಲ್ಲಿ ಇತ್ತ ಸುಳಿಯಲಿಲ್ಲ. ಈಗ ಚುನಾವಣೆ ಬಂದಿದೆ. ರೋಡ್ ಶೋ ಮಾಡುತ್ತಿದ್ದಾರೆ.ಬಿಜೆಪಿಯವರಿಗೆ ಮತದಾರರ ಮುಂದೆ ಹೊಗಲಿಕ್ಕೆ ಮುಖವಿಲ್ಲ. ಅವರಿಗೆ ನಾಚಿಕೆಯಾಗಬೇಕು ಎಂದರು. ಬಂಡವಾಳ ಶಾಹಿಗಳ 11 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ರೈತರ ಸಾಲಮನ್ನಾ ಏಕೆ ಮಾಡಲಿಲ್ಲ.

ಯುಪಿಎ ಸರಕಾರದ ಅವಧಿಯಲ್ಲಿ ಮನಮೋಹನ ಸಿಂಗ್ ಅವರು 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು. ಇದು ಲಂಚಾವತಾರ ಸರಕಾರವಾಗಿದೆ. ಜನಸಾಮಾನ್ಯರು ವಿಧಾನಸೌಧ ಗೋಡೆಗಳಲ್ಲಿ ಸಹ ಲಂಚ ಲಂಚ ಎನ್ನುವಂತಾಗಿದೆ. ನಮ್ಮ ಸರಕಾರ 2023ರ ಚುನಾವಣೆಯಲ್ಲಿ ಜನತೆಗೆ ಪ್ರತಿತಿಂಗಳು 200 ಯೂನಿಟ್ ಉಚಿತ ವಿದ್ಯುತ್, ಮನೆಯ ಒಡತಿಗೆ ಪ್ರತಿತಿಂಗಳು 2000 ರೂ. ವರ್ಷಕ್ಕೆ 24ಸಾವಿರರೂ. , 10 ಕೆ.ಜಿ ಅಕ್ಕಿ, 1500 ರೂ ಡಿಪ್ಲೋಮಾ ಓದಿದವರಿಗೆ ನೀಡಲಾಗುವುದು. ಇನ್ನೂ ಹಲವಾರು ಜನಪರ ಯೋಜನೆಗಳ ಪ್ರನಾಳಿಕೆ ಬಿಡುಗಡೆಗೊಳಿಸಲಾಗುವದು. ರಾಜ್ಯದಲ್ಲಿ ಬ್ರಷ್ಟಾಚಾರ ತೊಲಗಬೇಕಾದರೆ ಕಾಂಗ್ರೆಸ್ ಸರಕಾರ ತರಬೇಕೆಂದರು. ನಾನು ಮುಖ್ಯಮಂತ್ರಿ ಅವಧಿಯಲ್ಲಿ ಬೈಲಹೊಂಗಲ ಮತಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದು ಶಾಸಕ ಮಹಾಂತೇಶ ಕೌಜಲಗಿಯವರ ಜನಪರ ಸೇವೆ ಅಮೋಘವಾಗಿದೆ ಎಂದರು. ಈಬಾರಿ ಚುನಾವಣೆಯಲ್ಲಿ ಮತ್ತೆ ಅವರನ್ನು ಆಶಿರ್ವದಿಸಬೇಕೆಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ, ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾದ್ಯಕ್ಷ ವಿನಯ ನಾವಲಗಟ್ಟಿ , ಅಡವೇಶ ಇಟಗಿ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಗೆ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ವೇದಿಕೆ ಮೇಲೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಕಾಂಗ್ರೆಸ್ ಉಸ್ತುವಾರಿ ಎಚ್.ಆರ್.ವಿಶ್ವನಾಥ, ಮಾಜಿ ಸಚಿವ ಶಿವಾನಂದ ಕೌಜಲಗಿ, ಬ್ಲಾಕ ಅಧ್ಯಕ್ಷ ಶಿವರುದ್ರ ಹಟ್ಟಿಹೋಳಿ, ಶಂಕರಗೌಡ ಪಾಟೀಲ, ಬಸವರಾಜ ಕೌಜಲಗಿ, ಪುರಸಭೆ ಅದ್ಯಕ್ಷ ಬಸವರಾಜ ಜನ್ಮಟ್ಟಿ, ಮಹಾಂತೇಶ ಮತ್ತಿಕೊಪ್ಪ, ಮಲ್ಲಪ್ಪ ಮುರಗೋಡ, ಬಾಬು ಕುಡಸೋಮನ್ನವರ, ಆನಂದ ಗಡ್ಡದೇವಮಠ, ಪ್ರಕಾಶ ರಾಠೋಡ,ಮಹಾಂತೇಶ ತುರಮರಿ, ಗೀತಾತಾಯಿ ದೇಸಾಯಿ,ಅರ್ಬಾಜ್ ಮುಲ್ಲಾ, ಪುರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ಇದ್ದರು. ಈ ಸಂದರ್ಭದಲ್ಲಿ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು , ನಾಗರಿಕರು ಇದ್ದರು. ಇದಕ್ಕೂ ಮುಂಚೆ ಶ್ರೀ ಮರಡಿಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಾವಿರಾರು ಯುವಕರು ಬೃಹತ್ ಬೈಕ್ ರ್ಯಾಲಿಯೊಂದಿಗೆ ಸಿದ್ದರಾಮಯ್ಯ , ಸತೀಶ ಜಾರಕಿಹೋಳಿ, ಮಹಾಂತೇಶ ಕೌಜಲಗಿಯವರನ್ನು ತೆರೆದ ಜೀಪಿನಲ್ಲಿ ಭವ್ಯ ಮೆರವಣಿಗೆ ಮೂಲಕ ವೇದಿಕೆಯತ್ತ ಕರೆ ತಂದರು. ವೇದಿಕೆಯತ್ತ ಬರುತ್ತಿದ್ದಂತೆ ಸಿದ್ದರಾಮಯ್ಯನವರಿಗೆ ಪುಷ್ಪ ಮಳೆ ಸುರಿಸಿದರು. ಮೆರವಣಿಗೆ ಯುದ್ದಕ್ಕೂ ಕಾಂಗ್ರೆಸ್ ಪಕ್ಷದ ಬಾವುಟಗಳು ರಾರಾಜಿಸಿದವು. ಹಾಲು ಮತದ ಸಮಾಜದಿಂದ ಕುರಿ, ಕಂಬಳಿ ನೀಡಿ ಸತ್ಕರಿಸಿದರು.